ಹೊಟ್ಟೆ-ಬಟ್ಟೆಗಿಲ್ಲದೆ ನರಳುತ್ತಿದ್ದ ಹಿರಿ ಜೀವಗಳು; ಕಟ್ಟಿ ಹಾಕಿ ಹೋಗಿದ್ದ ಮಾಲೀಕ
ನವದೆಹಲಿ : ಜೀವನದ ಸಂಧ್ಯಾಕಾಲದಲ್ಲಿದ್ದ 39 ವೃದ್ಧರನ್ನು ವೃದ್ಧಾಶ್ರಮವೊಂದರಲ್ಲಿ ನರಕಕ್ಕಿಂತಲೂ ಕಡೆಯಾಗಿ ಬಂಧಿಸಿಟ್ಟಿದ್ದ ಆಘಾತಕಾರಿ ಘಟನೆಯೊಂದು ದೆಹಲಿ ಸಮೀಪ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ವೃದ್ಧರನ್ನು ಕೋಣೆಗಳಲ್ಲಿ ಅಕ್ಷರಶಃ ಬಂಧಿಸಲಾಗಿತ್ತು, ಅವರನ್ನು ನೋಡಿಕೊಳ್ಳಲು ಅಲ್ಲಿ ಯಾರೆಂದರೆ ಯಾರೂ ಇರಲಿಲ್ಲ, ಕೆಲವರು ಮೂತ್ರ ಮತ್ತು ಮಲ ಮೆತ್ತಿಕೊಂಡಿದ್ದ ಬಟ್ಟೆಗಳನ್ನು ಧರಿಸಿದ್ದರೆ ಕೆಲವರ ಮೈಮೇಲೆ ಬಟ್ಟೆಯೇ ಇರಲಿಲ್ಲ. ನೋಯ್ಡಾದ ಸೆಕ್ಟರ್ 55ರಲ್ಲಿರುವ ಆನಂದ್ ನಿಕೇತನ ಎಂಬ ವೃದ್ಧಾಶ್ರಮಕ್ಕೆ ದಾಳಿ ಮಾಡಿದಾಗ ಅಲ್ಲಿ ಹಿರಿಜೀವಗಳು ಅತ್ಯಂತ ದಯನೀಯ ಸ್ಥಿತಿಯಲ್ಲಿರುವುದು ಕಂಡುಬಂದಿದ್ದು, ಇದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ.

ವೃದ್ಧಾಶ್ರಮದ ದುಸ್ಥಿತಿಯ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದ್ದು, ಅದನ್ನು ಲಖನೌನ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಲಾಗಿತ್ತು. ಆ ಕಿರು ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬಳ ಕೈಗಳನ್ನು ಕಟ್ಟಿ ಕೋಣೆಯಲ್ಲಿ ಇರಿಸಿದ್ದು ಕಾಣಿಸುತ್ತಿತ್ತು. ಇದಾದ ಕೂಡಲೇ ರಾಜ್ಯ ಮಹಿಳಾ ಆಯೋಗ ಮತ್ತು ನೋಯ್ಡಾ ಪೊಲೀಸರು ಗುರುವಾರ ಆಶ್ರಮದ ಮೇಲೆ ದಾಳಿ ನಡೆಸಿ 39 ಹಿರಿಯ ನಾಗರಿಕರನ್ನು ರಕ್ಷಿಸಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಅನೇಕ ವೃದ್ಧರನ್ನು ಬಟ್ಟೆಗಳಲ್ಲಿ ಕಟ್ಟಿಹಾಕಿ ಕೊಠಡಿಗಳಲ್ಲಿ ಬೀಗ ಹಾಕಿರುವುದು ಕಂಡುಬಂದಿತ್ತು. , ಕೆಲವು ವೃದ್ಧರನ್ನು ನೆಲಮಾಳಿಗೆಯಂತಹ ಕೋಣೆಗಳಲ್ಲಿ ಬಂಧಿಸಲಾಗಿತ್ತು. ಹೆಚ್ಚಿನ ವೃದ್ಧ ಪುರುಷರ ಮೈಮೇಲೆ ಬಟ್ಟೆಯೇ ಇರಲಿಲ್ಲ. ವೃದ್ಧೆಯರು ಧರಿಸಿದ್ದ ಬಟ್ಟೆ ಅವರ ಮೈಮುಚ್ಚುತ್ತಿರಲಿಲ್ಲ ಎಂದು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾಕ್ಷಿ ಭಾರಲಾ ತಿಳಿಸಿದ್ದಾರೆ.
ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರನ್ನು ನೋಡಿಕೊಳ್ಳಲು ಸರಿಯಾದ ಸಿಬ್ಬಂದಿ ವ್ಯವಸ್ಥೆ ಕೂಡ ಇರಲಿಲ್ಲ ಎನ್ನಲಾಗಿದೆ. ಆಶ್ರಮ ವೃದ್ಧರ ಕುಟುಂಬಗಳಿಂದ 2.5 ಲಕ್ಷ ರೂ. ದೇಣಿಗೆ ಪಡೆದು ಅವರನ್ನು ಸೇರಿಸಿಕೊಂಡಿತ್ತು ಮತ್ತು ಹೆಚ್ಚುವರಿಯಾಗಿ ಅವರ ಆಹಾರ ಮತ್ತು ವಸತಿಗಾಗಿ ತಿಂಗಳಿಗೆ 6,000 ರೂ.ಗಳನ್ನು ಪಡೆದುಕೊಳ್ಳುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವೃದ್ಧಾಶ್ರಮದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ವೃದ್ಧರನ್ನು ಸರ್ಕಾರಿ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.
























