ಐದು ಹುಲಿಗಳ ಸಾವು : ಐವರು ಶಂಕಿತರ ವಶ

ಗ್ರಾಮಸ್ಥರ ವಿಚಾರಣೆ; ಗೋವಿನ ಮಾಲೀಕನ ಹುಡುಕಾಟ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹುಲಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಆಶ್ವಾಸನೆ ನೀಡಿದೆ. ಹುಲಿಗಳ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದ್ದು, ವರದಿ ಕೈಸೇರಿದ ಬಳಿಕ ಸಾವಿಗೆ ನಿಖರ ಕಾರಣ ಏನೆಂಬುದು ಗೊತ್ತಾಗಲಿದೆ.

ಹುಲಿ ಸಾವು ಸಂಬಂಧ ಮೀಣ್ಯಂ ಅರಣ್ಯ ಪ್ರದೇಶ ಸಮೀಪದ ಗ್ರಾಮಸ್ಥರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಗ್ರಾಮಸ್ಥರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ. ಹಸುವಿನ ಕಳೇಬರಹದ ಬಳಿ ಕರೆದುಕೊಂಡು ಹೋಗಿ ಯಾರು ಅದರ ಮಾಲೀಕರು ಎಂಬುದನ್ನೂ ವಿಚಾರಣೆ ಮಾಡಲಾಗುತ್ತಿದೆ.





















































 
 

ಹುಲಿಗಳ ಮೃತದೇಹಗಳು ದೊರೆತ ಸ್ಥಳದಲ್ಲಿಯೇ ಹಸುವಿನ ಶವ ಕೂಡ ಸಿಕ್ಕಿದ್ದು, ಹುಲಿಗಳಿಗೆ ವಿಷಪ್ರಾಶನ ಮಾಡಿರುವ ಶಂಕೆಗೆ ಕಾರಣವಾಗಿದೆ. ಹಸುವಿನ ಮೃತದೇಹದ ಬಾಲ ತುಂಡಾಗಿರುವುದು ಕಂಡು ಬಂದಿದೆ. ಹೀಗಾಗಿ ಸತ್ತ ಹಸುವಿಗೆ ಯಾರೋ ವಿಷ ಸಿಂಪಡಿಸಿರುವ ಸಾಧ್ಯತೆ ಇದೆ. ಅದನ್ನು ತಿಂದು ಹುಲಿ ಮತ್ತು ಹುಲಿಮರಿಗಳು ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ನಂತರ ಸತ್ಯ ಏನೆಂಬುದು ಗೊತ್ತಾಗಲಿದೆ.

ಹೂಗ್ಯಂ ಅರಣ್ಯ ವಲಯದ ಮೀಣ್ಯಂ ಸಮೀಪ ಮಹದೇಶ್ವರ ಗುಡಿ ಬಯಲಿನಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳ ಮೃತದೇಹಗಳು ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಪತ್ತೆಯಾಗಿದ್ದು ಅನತಿ ದೂರದಲ್ಲಿ ಹಸುವೊಂದರ ಮೃತದೇಹವೂ ಕಂಡು ಬಂದಿತ್ತು.
ಐದು ಹುಲಿಗಳು ಒಮ್ಮಲೇ ಮೃತಪಟ್ಟಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ತನಿಖೆಗೆ ಪಿಸಿಸಿಎಫ್ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಿ ಗುರುವಾರ ಸಂಜೆ ಆದೇಶ ಹೊರಡಿಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಅಥವಾ ವಿಷಪ್ರಾಶನದಿಂದ ಮೃತಪಟ್ಟಿದ್ದರೆ ಅದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸಚಿವರು ಈಗಾಗಲೇ ಆದೇಶಿಸಿದ್ದಾರೆ. ಆರು ಮಂದಿಯ ತನಿಖಾ ತಂಡ ತನಿಖೆ ನಡೆಸುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top