ನವದೆಹಲಿ: ಕೇಂದ್ರ ಸರ್ಕಾರ ದ್ವಿಚಕ್ರ ವಾಹನಗಳಿಗೂ ಟೋಲ್ ವಿಧಿಸುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗುತ್ತಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ. ಆ ರೀತಿಯ ಯಾವ ನಿರ್ಣಯವನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಟೋಲ್‌ಗಳಲ್ಲಿ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ಮುಂದುವರಿಯಲಿದೆ. ಸತ್ಯ ತಿಳಿಯದೆ ಜನರ ದಾರಿ ತಪ್ಪಿಸುವುದು ಉತ್ತಮ, ಆರೋಗ್ಯಕರ ಪತ್ರಿಕೋದ್ಯಮ ಅಲ್ಲ. ಅದನ್ನು ತಾನು ಖಂಡಿಸುವುದಾಗಿ ಬರೆದುಕೊಂಡಿದ್ದಾರೆ.
ಹಾಗೆಯೇ, ದ್ವಿಚಕ್ರ ವಾಹನಗಳ ಮೇಲೆ ಟೋಲ್ ವಿಧಿಸಲಾಗುವುದು ಎಂಬ ಸುದ್ದಿ ನಕಲಿ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹ ಹೇಳಿದೆ.
























