ನವದೆಹಲಿ: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ರಕ್ಷಣಾ ಸಚಿವರ ಸಭೆಯಲ್ಲಿ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಗ್ರ ಕೃತ್ಯಗಳ ಬಗ್ಗೆ ಎಸ್ಸಿಒ ಸದಸ್ಯ ರಾಷ್ಟ್ರಗಳು ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಭೆಯಲ್ಲಿ ಪಾಕ್ ನಡೆಸಿದ ಪಹಲ್ಗಾಮ್ ದಾಳಿಯ ಬಗ್ಗೆಯೂ ಮಾತನಾಡಿದ ಅವರು, ಇದಕ್ಕೆ ಪ್ರತ್ಯುತ್ತರ ಎಂಬಂತೆ ಭಾರತ ನಡೆಸಿದ ಕಾರ್ಯಾಚರಣೆ ಆಪರೇಶನ್ ಸಿಂಧೂರ್ ಬಗೆಗೂ ಉಲ್ಲೇಖಿಸಿದರು. ಗಡಿಯಾಚೆಗಿನ ಮತ್ತು ಗಡಿಯೊಳಗಿವ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯ ನಾಶ ಮಾಡಲು ಆಪರೇಷನ್ ಸಿಂಧೂರ್ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪಾಕಿಸ್ತಾನವನ್ನು ನೇರವಾಗಿ ಟೀಕಿಸಿರುವ ಅವರು, ಕೆಲವು ದೇಶಗಳು ಉಗ್ರವಾದವನ್ನು ನೀತಿಯ ಸಾಧನವಾಗಿ ಬಳಸುತ್ತಿವೆ. ಜೊತೆಗೆ ಉಗ್ರರಿಗೆ ಆಶ್ರಯ ನೀಡುತ್ತಿವೆ. ಅಂತಹ ದ್ವಿಮುಖ ನೀತಿಗೆ ಭಾರತದಲ್ಲಿ ಜಾಗವಿಲ್ಲ. ಅಂತಹ ದೇಶಗಳನ್ನು ಎಸ್ಸಿಒ ಸಹ ಟೀಕಿಸಬೇಕು ಎಂದು ಅವರು ತಿಳಿಸಿದ್ದಾರೆ.
ಭಾರತ ಉಗ್ರವಾದಕ್ಕೆ ಶೂನ್ಯ ಸಹಿಷ್ಣುತೆ ತೋರುತ್ತಿದೆ. ಇದಕ್ಕಾಗಿ ತೆಗೆದುಕೊಳ್ಳಲಾದ ಹಲವಾರು ಕ್ರಮಗಳನ್ನೂ ಅವರು ಈ ಸಭೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಉಗ್ರ ಕೇಂದ್ರಬಿಂದುಗಳು ಇನ್ನು ಸುರಕ್ಷಿತವಾಗಿರಲು ಅಸಾಧ್ಯ ಎನ್ನುವುದನ್ನು ಸಹ ನಾವು ತೋರಿಸಿದ್ದೇವೆ. ಉಗ್ರವಾದವನ್ನು ಗುರಿ ಮಾಡಲು ಭಾರತ ಹಿಂದೆ ಮುಂದೆ ನೋಡುವುದಿಲ್ಲ ಎಂದು ಅವರು ಹೇಳಿದ್ದಾರೆ.
























