ಬೆಂಗಳೂರು: ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆ ಮಾಡುವಂತೆ ರಾಜ್ಯದ ಎಲ್ಲಾ ಇಲಾಖೆಗಳಿಗೆ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ 60% ಕನ್ನಡ ಕಡ್ಡಾಯ ಎಂಬ ಆದೇಶ ಈಗಾಗಲೇ ಚಾಲ್ತಿಯಲ್ಲಿದೆ. ಇದು ಸಮರ್ಪಕವಾಗಿ ಇನ್ನೂ ಜಾರಿಯಾಗಿಲ್ಲ. ಹೀಗಿರುವಾಗಲೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಇಲಾಖೆಗಳಲ್ಲಿಯೂ ಕನ್ನಡ ಕಡ್ಡಾಯ ಎಂಬ ಸುತ್ತೋಲೆ ಹೊರಡಿಸಿರುವುದಾಗಿದೆ.
ಈ ನಿಯಮವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಸರ್ಕಾರ ನೀಡಿದೆ. ಈ ನಿಯಮಾನುಸಾರ ಕನ್ನಡದಲ್ಲಿ ಬರುವ ಪತ್ರಗಳಿಗೆ ಕನ್ನಡದಲ್ಲೇ ಉತ್ತರ ನೀಡುವಂತೆ ಸೂಚಿಸಲಾಗಿದೆ. ಕನ್ನಡದಲ್ಲೇ ಕಚೇರಿಯ ನಾಮಪತ್ರಗಳು ನಮೂದಾಗಬೇಕು. ಸರ್ಕಾರದ ಎಲ್ಲಾ ಇಲಾಖೆಗಳ ಸುತ್ತೇಲೆಯನ್ನು ಕನ್ನಡದಲ್ಲೇ ಹೊರಡಿಸಬೇಕಿದೆ. ಆದೇಶ ಪ್ರತಿಗಳೂ ಸಹ ಕನ್ನಡದಲ್ಲೇ ಇರಬೇಕು ಎಂದು ಸೂಚಿಸಲಾಗಿದೆ.
ಭಾಷಾ ನೀತಿಯನ್ನು ಆಡಳಿತದ ಎಲ್ಲಾ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವುದು ಎಲ್ಲಾ ಸರ್ಕಾರಿ ನೌಕರರು, ಅಧಿಕಾರಿಗಳ ಜವಾಬ್ದಾರಿ. ಇದನ್ನು ಸರಿಯಾಗಿ ಪಾಲನೆ ಮಾಡಬೇಕು. ತಪ್ಪಿದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.
























