ಟ್ರಂಪ್ ಹೇಳಿಕೆಯನ್ನು ಕೆಲವೇ ತಾಸುಗಳಲ್ಲಿ ನಿರಾಕರಿಸಿ ಉಲ್ಟಾ ಹೊಡೆದ ಇರಾನ್
ಟೆಹ್ರಾನ್ : ಇರಾನ್-ಇಸ್ರೇಲ್ ಯುದ್ಧ ಮುಂದಿನ 12 ಗಂಟೆಯಲ್ಲಿ ಸಂಪೂರ್ಣ ನಿಂತುಹೋಗುತ್ತದೆ, ಕದನ ವಿರಾಮಕ್ಕೆ ಇರಾನ್ ಹಾಗೂ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಇರಾನ್ ಯಾವುದೇ ಕದನ ವಿರಾಮ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಯುದ್ಧ ಆರಂಭಿಸಿದ್ದು ಇಸ್ರೇಲ್. ಇದುವರೆಗೆ ಯಾವುದೇ ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಗೆ ಯಾವುದೇ ಒಪ್ಪಂದ ಆಗಿಲ್ಲ. ಇಸ್ರೇಲ್ ತನ್ನ ಕಾನೂನುಬಾಹಿರ ಆಕ್ರಮಣವನ್ನು ನಿಲ್ಲಿಸಿದರೆ ನಾವು ಯುದ್ಧ ಮುಂದುವರಿಸುವ ಉದ್ದೇಶ ಹೊಂದಿಲ್ಲ. ನಮ್ಮ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಇರಾನ್, ಇಸ್ರೇಲ್ ಜೊತೆಗಿನ ಕದನ ವಿರಾಮ ಒಪ್ಪಂದವನ್ನು ನಿರಾಕರಿಸಿದೆ. ಸದ್ಯಕ್ಕೆ ಯಾವುದೇ ಒಪ್ಪಂದವಿಲ್ಲ ಎಂದು ಹೇಳಿದೆ. ಇರಾನ್ ವಿದೇಶಾಂಗ ಸಚಿವರು ಹೇಳುವಂತೆ, ಇಸ್ರೇಲ್ ತನ್ನ ವಾಯುದಾಳಿಗಳನ್ನು ಟೆಹ್ರಾನ್ನ ಸ್ಥಳೀಯ ಸಮಯ ಬೆಳಗ್ಗೆ 4 ಗಂಟೆಯೊಳಗೆ ನಿಲ್ಲಿಸಿದರೆ, ಇರಾನ್ ತನ್ನ ದಾಳಿಯನ್ನು ನಿಲ್ಲಿಸುತ್ತದೆ ಎಂದಿದೆ.
ಕತಾರ್ ಹಾಗೂ ಇರಾಕ್ನಲ್ಲಿರುವ ಅಮೆರಿಕ ಸೇನಾ ಪಡೆಗಳ ಮೇಲೆ ಇರಾನ್ ವಾಯುದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಕದನ ವಿರಾಮ ಒಪ್ಪಂದದ ಬಗ್ಗೆ ಘೋಷಣೆ ಮಾಡಿತ್ತು. ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿದ್ದು, ಇರಾನನ್ನು ಒಪ್ಪಿಸುವಂತೆ ಅಮೆರಿಕ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ನೆರವು ಕೇಳಿತ್ತು.
ಆದರೆ ಇರಾನ್ನ ಟೆಹ್ರಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಕದನ ವಿರಾಮದ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ. ಮಾತುಕತೆಗಳು ನಡೆಯುತ್ತಿವೆ. ಆದರೆ, ಯಾವುದೇ ಒಪ್ಪಂದಕ್ಕೆ ಎರಡೂ ದೇಶಗಳು ಬಂದಿಲ್ಲ. ಪರಿಸ್ಥಿತಿಯನ್ನು ಶಾಂತಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಮಂಗಳವಾರ ಬೆಳಗ್ಗಿನ ಜಾವ ಪೋಸ್ಟ್ ಮಾಡಿದ್ದ ಟ್ರಂಪ್, ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಮತ್ತು ಒಟ್ಟಾರೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಎಲ್ಲರಿಗೂ ಅಭಿನಂದನೆಗಳು. ಈಗಿನಿಂದ ಸುಮಾರು 6 ಗಂಟೆಗಳಲ್ಲಿ, ಇಸ್ರೇಲ್ ಮತ್ತು ಇರಾನ್ ತಮ್ಮ ಪ್ರಗತಿಯಲ್ಲಿರುವ ಅಂತಿಮ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದಾಗ ಆ ಸಮಯದಲ್ಲಿ ಯುದ್ಧವನ್ನು ಕೊನೆಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಧಿಕೃತವಾಗಿ, ಇರಾನ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ ಮತ್ತು 12ನೇ ಗಂಟೆಯಲ್ಲಿ, ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ ಮತ್ತು 24ನೇ ಗಂಟೆಯಲ್ಲಿ, 12 ದಿನದ ಯುದ್ಧದ ಅಧಿಕೃತ ಅಂತ್ಯವನ್ನು ಜಗತ್ತು ಸ್ವಾಗತಿಸುತ್ತದೆ. ಇದು ವರ್ಷಗಳ ಕಾಲ ನಡೆಯಬಹುದಾದ ಯುದ್ಧ, ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು, ಆದರೆ ಅದು ಆಗಲಿಲ್ಲ, ಮತ್ತು ಎಂದಿಗೂ ಆಗುವುದಿಲ್ಲ ಎಂದು ಘೋಷಿಸಿದ್ದರು.
























