ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಆ ಗೂಢಚಾರಿಣಿ ಯಾರು?

ಮೊಸಾದ್‌ನ ಲೇಡಿ ಏಜೆಂಟ್‌ ಸೌಂದರ್ಯಕ್ಕೆ ಮರುಳಾಗಿ ಗುಂಡಿಗೆ ಬಿದ್ದ ಇರಾನ್‌ ಸೇನಾಧಿಕಾರಿಗಳು

ಟೆಲ್‌ ಅವಿವ್‌: ಇಸ್ರೇಲ್‌-ಇರಾನ್‌ ಯುದ್ಧ ತೀವ್ರಗೊಂಡಿದೆ. ಅಮೆರಿಕ ಯುದ್ಧರಂಗಕ್ಕೆ ಪ್ರವೇಶಿಸಿದ ಬಳಿಕ ಯುದ್ಧದ ಸ್ವರೂಪವು ಬದಲಾಗಿದೆ. ಈ ಎಲ್ಲದರ ನಡುವೆ ಗಾತ್ರ, ಸಂಪನ್ಮೂಲ, ಜನಸಂಖ್ಯೆ, ಸೇನಾಬಲ, ಶಸ್ತ್ರಾಸ್ತ್ರ… ಹೀಗೆ ಎಲ್ಲ ವಿಚಾರದಲ್ಲೂ ಇರಾನ್‌ಗಿಂತ ಬಹಳ ಹಿಂದೆ ಇರುವ ಇಸ್ರೇಲ್‌ ಈ ಪರಿಯಲ್ಲಿ ನಿಖರ ದಾಳಿ ನಡೆಸುತ್ತಿರುವುದು ಹೇಗೆ ಎಂದು ಇಡೀ ಜಗತ್ತು ನಿಬ್ಬೆರಗಾಗಿ ನೋಡುತ್ತಿದೆ. ಅದರಲ್ಲೂ ಯುದ್ಧ ಶುರುವಾದ ಆರಂಭದಲ್ಲೇ ಇರಾನಿನ ಪ್ರಮುಖ ಮಿಲಿಟರಿ ನಾಯಕರನ್ನು ಇಸ್ರೇಲ್‌ ನಿಖರ ದಾಳಿ ಮಾಡಿ ಸಾಯಿಸಿದೆ. ಇದು ಹೇಗೆ ಸಾಧ್ಯವಾಯಿತು ಎಂದು ಇರಾನ್‌ ಕೂಡ ಬಹಳ ತಲೆಕೆಡಿಸಿಕೊಂಡಿದ್ದು, ಈಗ ಇಸ್ರೇಲ್‌ ಪರ ಗೂಢಚಾರಿಣಿಯೊಬ್ಬಳು ಕೆಲಸ ಮಾಡಿರುವುದು ಬಯಲಾಗಿದೆ. ಮೊಸಾದ್‌ ತರಬೇತಿ ನೀಡಿದ ಸುಂದರ ಯುವತಿಯೊಬ್ಬಳು ಇಡೀ ಇರಾನ್‌ ಆಡಳಿತ ವ್ಯವಸ್ಥೆಯನ್ನು ಯಾಮಾರಿಸಿ ಕೆಲಸ ಮಾಡಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಫ್ರಾನ್ಸ್‌ ಮೂಲದ ಕ್ಯಾಥರೀನ್ ಪೆರೆಜ್ ಶಕ್ದಮ್ ಈ ಗೂಢಚಾರಿಣಿ ಎಂದು ಗುರುತಿಸಲಾಗಿದೆ. ಈಕೆ ಎರಡು ವರ್ಷದ ಹಿಂದೆ ಮೊಸಾದ್‌ನಿಂದ ತರಬೇತಿ ಪಡೆದು ರಹಸ್ಯವಾಗಿ ಇರಾನ್‌ ಪ್ರವೇಶಿಸಿದ್ದಳು. ಪರಮ ಸುಂದರಿಯಾಗಿದ್ದ ಈಕೆ ಫ್ರಾನ್ಸ್‌ನಲ್ಲಿ ಯಹೂದಿ ಕುಟುಂಬದಲ್ಲಿ ಜನಿಸಿದವಳು. ಕ್ಯಾಥರೀನ್ ಶಿಯಾ ಇಸ್ಲಾಂಗೆ ಮತಾಂತರಗೊಂಡು ನಿಧಾನವಾಗಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ಹತ್ತಿರವಾಗಿದ್ದಳು.





















































 
 

ನಾನು ಇಸ್ಲಾಂ ಧರ್ಮದ ಬಗ್ಗೆ ಮತ್ತು ಇರಾನ್‌ ದೇಶದ ಆಡಳಿತದ ಬಗ್ಗೆ ಒಲವು ಹೊಂದಿದ್ದೇನೆ ಎಂದು ಹೇಳಿ ಇಸ್ಲಾಂ ಧರ್ಮದ ನಿಯಮಗಳನ್ನುಬಹಳ ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಳು. ಮತಾಂತರಗೊಂಡ ಬಳಿಕ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ನೆಲೆಯಾಗಿದ್ದ ಈಕೆ ಸರ್ಕಾರಿ ಅಧಿಕಾರಿಗಳ ಪತ್ನಿಯದಿರನ್ನು ಭೇಟಿಯಾಗಿ ಮಾತನಾಡಲು ಆರಂಭಿಸಿದ್ದಳು. ನಂತರದ ದಿನಗಳಲ್ಲಿ ಈಕೆ ಎಷ್ಟು ವಿಶ್ವಾಸ ಗಳಿಸಿದ್ದಳು ಎಂದರೆ ಸೇನಾ ನಾಯಕರ ಮನೆಗೆ ನಿಯಮಿತ ಹೋಗುವ ಮಟ್ಟಕ್ಕೆ ಆಪ್ತತೆ ಬೆಳೆದಿತ್ತು.

ಈಕೆಯ ಬರಹಗಳು ನಿಯಮಿತವಾಗಿ ಪ್ರೆಸ್ ಟಿವಿ, ಟೆಹ್ರಾನ್ ಟೈಮ್ಸ್ ಮತ್ತು ಖಮೇನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದವು. ಬರಹಗಾರ್ತಿ, ಪತ್ರಕರ್ತೆ ಮತ್ತು ಚಿಂತಕಿಯಾಗಿ ಗುರುತಿಸಿಕೊಂಡು ಇರಾನ್‌ ಪ್ರವೇಶಿಸಿದ್ದ ಕ್ಯಾಥರೀನ್ ತನ್ನ ಲೇಖನದ ಮೂಲಕ ಇರಾನಿನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಳು.

ಸೇನೆಯಲ್ಲಿರುವ ಉನ್ನತ ನಾಯಕರ ಮನೆಗೆ ಅಷ್ಟು ಸುಲಭವಾಗಿ ಯಾರನ್ನೂ ಬಿಡುವುದಿಲ್ಲ. ಆದರೆ ಬಿಗಿ ಭದ್ರತೆ ಇದ್ದ ಈ ಮನೆಗಳಿಗೆ ಕ್ಯಾಥರೀನ್ ಬಹಳ ಸಲೀಸಾಗಿ ಹೋಗಿ ಬರುತ್ತಿದ್ದಳು. ಮನೆಗೆ ಭೇಟಿ ನೀಡುತ್ತಾ ಆಕೆ ಉನ್ನತ ಕಮಾಂಡರ್‌ಗಳ ಬಗ್ಗೆ ಗುಪ್ತ ಮಾಹಿತಿಯನ್ನು ಸದ್ದಿಲ್ಲದೆ ಸಂಗ್ರಹಿಸುತ್ತಿದ್ದಳು. ಸೇನಾ ನಾಯಕರ ಮನೆ ಮಾತ್ರವಲ್ಲ ಸಾಮಾನ್ಯವಾಗಿ ಯಾರಿಗೂ ಪ್ರವೇಶ ಇಲ್ಲದ ಅಥವಾ ಕಠಿಣ ಪರಿಶೀಲನೆಯ ನಂತರ ಪ್ರವೇಶಿಸಬಹುದಾಗಿದ್ದ ಖಾಸಗಿ ಸ್ಥಳಗಳಿಗೆ ಈಕೆ ಬಹಳ ಸಲೀಸಲಾಗಿ ತೆರಳುತ್ತಿದ್ದಳು.

ಇರಾನ್‌ ಏಜೆನ್ಸಿಗಳು ಸಂದರ್ಶಕರ ಫೋನ್‌ ಇತ್ಯಾದಿಗಳನ್ನು ಪರಿಶೀಲಿಸುತ್ತಿದ್ದರೂ ಕ್ಯಾಥರೀನ್ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ರಹಸ್ಯ ಮಾಹಿತಿಯನ್ನು ಸಂಗ್ರಹಿಸಿ ನೇರವಾಗಿ ಮೊಸಾದ್‌ಗೆ ಕಳುಹಿಸುತ್ತಿದ್ದಳು. ಕಳೆದ ಮೂರು ವಾರಗಳಲ್ಲಿ ಸೇನಾ ಮುಖ್ಯಸ್ಥರಿಂದ ಹಿಡಿದು ಐಆರ್‌ಜಿಸಿ ನಾಯಕರವರೆಗೆ 9 ಉನ್ನತ ಇರಾನಿನ ಮಿಲಿಟರಿ ಕಮಾಂಡರ್‌ಗಳನ್ನು ಇಸ್ರೇಲ್ ಕೊಂದು ಹಾಕಿದೆ. ಪ್ರತಿಬಾರಿಯೂ, ಇಸ್ರೇಲಿ ಜೆಟ್‌ಗಳು ಈ ಅಧಿಕಾರಿಗಳು ನೆಲೆಸಿದ್ದ ನಿಖರವಾಗಿ ಕಟ್ಟಡವನ್ನು ಗುರಿಯಾಗಿಸಿಕೊಂಡು ಮಾರಕ ದಾಳಿಗಳನ್ನು ನಡೆಸಿವೆ. ಇದು ಸಾಧ್ಯವಾಗಿರುವುದು ಈಕೆ ಕಳುಹಿಸಿದ ಮಾಹಿತಿಯಿಂದ. ಇಸ್ರೇಲ್‌ ಕೆಲ ದಿನಗಳಿಂದ ಸೇನಾ ನಾಯಕರ ಮತ್ತು ವಿಜ್ಞಾನಿಗಳ ಮನೆ ಮೇಲೆ ನಿಖರ ದಾಳಿ ಮಾಡಿರಬಹುದು ಎಂದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ಇಸ್ರೇಲ್‌ ದಾಳಿ ಆರಂಭಿಸುತ್ತಿದ್ದಂತೆ ಸೇನಾ ನಾಯಕರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಸುರಕ್ಷಿತ ಸ್ಥಳಕ್ಕೆ ತೆರಳಿದ್ದರೂ ಇಸ್ರೇಲ್‌ ಆ ಜಾಗಕ್ಕೆ ನಿಖರವಾಗಿ ದಾಳಿ ಮಾಡಿ ಹತ್ಯೆ ಮಾಡುತ್ತಿತ್ತು. ಇಸ್ರೇಲ್‌ ದಾಳಿಗೆ ಬೆಚ್ಚಿಬಿದ್ದ ಇರಾನ್‌ ಗುಪ್ತಚರ ಸಂಸ್ಥೆ ತನಿಖೆ ಆರಂಭಿಸಿತು. ಆಗ ಅಧಿಕಾರಿಗಳು ಕ್ಯಾಥರೀನ್ ಜೊತೆ ತೆಗೆಸಿದ್ದ ಫೋಟೋಗಳು ನಂತರ ಆಕೆ ನಿಯಮಿತವಾಗಿ ಮನೆಗೆ ಭೇಟಿ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಬಯಲಾಗುತ್ತಿದ್ದಂತೆ ಇರಾನ್‌ ಆಕೆಯ ಪತ್ತೆಗೆ ಬಲೆ ಬೀಸಿದೆ. ಆದರೆ ಅಷ್ಟು ಹೊತ್ತಿಗಾಗಲೇ ಆಕೆ ಇರಾನ್‌ನಿಂದ ಕಣ್ಮರೆಯಾಗಿದ್ದಳು.

ಇರಾನ್‌ನ ಗುಪ್ತಚರ ಸಂಸ್ಥೆ ಈಕೆಯ ಪೋಸ್ಟರ್‌ಗಳು ಮತ್ತು ಫೋಟೋಗಳನ್ನು ದೇಶಾದ್ಯಂತ ಪ್ರಕಟಿಸಿ ಈಕೆಯ ಸುಳಿವು ನೀಡಬೇಕೆಂದು ಕೇಳಿಕೊಂಡಿದೆ. ಒಂದೋ ಆಕೆ ತನ್ನ ಗುರುತನ್ನು ಬದಲಾಯಿಸಿರಬೇಕು ಅಥವಾ ಬೇರೆ ದೇಶಕ್ಕೆ ತೆರಳಿರಬಹುದು ಎಂದು ವರದಿಯಾಗಿದೆ. ಇರಾನಿನ ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೋಗಳು ಈಗ ವೈರಲ್‌ ಆಗಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top