ಅಪಹಾಸ್ಯ, ಅಪಮಾನಗಳನ್ನೆಲ್ಲ ಸಹಿಸಿ ಕನಸು ನನಸು ಮಾಡಿಕೊಂಡ ದಿಟ್ಟ ಮಹಿಳೆ
ಮನಸ್ಸಿದ್ದರೆ ಮಾರ್ಗ ಇದೆ ಎಂಬ ಗಾದೆ ಮಾತಿದೆ. ಯಾರಿಗೆ ತಾನು ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಇದೆಯೋ, ಅದನ್ನು ಸಾಧಿಸಲು ಯಾರು ಕಠಿಣ ಶ್ರಮ ಹಾಕುತ್ತಾರೋ ಅವರಿಗೆ ಸಾಧನೆಯ ಹಾದಿಯಲ್ಲಿ ಗುರಿ ತಲುಪುವುದು ಸಾಧ್ಯವಾಗುತ್ತದೆ. ಇದಕ್ಕೆ ಸಾಕ್ಷಿ ಕೇರಳದ ವಕೀಲೆ ಎಂ. ಅಂಬಿಕಾ.
ಅಂಬಿಕಾ ಅವರಿಗೆ ಈಗ 46 ವರ್ಷ. ಅದರಲ್ಲೇನು ವಿಶೇಷ ಎಂದಿರಾ? ಅದರಲ್ಲೇ ಇರುವುದು ವಿಶೇಷ. ತಾನು ಏನನ್ನಾದರೂ ಸಾಧಿಸಲೇ ಬೇಕು ಎಂದುಕೊಂಡವರಿಗೆ ಮಾದರಿ ಮತ್ತು ಸ್ಫೂರ್ತಿಯಾಗುವಂತಹ ವಿಶೇಷ.
ಎಂ. ಅಂಬಿಕಾ ಅವರು ನಮ್ಮ ನೆರೆಯ ರಾಜ್ಯ ಕೇರಳದ ತೃಶ್ಯೂರ್‌ನವರು. 1994ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ಬಳಿಕ ಅವರ ವಿದ್ಯಾಭ್ಯಾಸದ ಕನಸು ಅಲ್ಲಿಗೇ ಮೊಟಕುಗೊಂಡಿತ್ತು. 18ನೇ ವಯಸ್ಸಿನಲ್ಲಿ ಮದುವೆಯಾಗಿ ಸಂಸಾರದ ಜವಾಬ್ದಾರಿಯನ್ನು ಸಹ ಹೆಗಲೇರಿಸಿಕೊಂಡವರು. 22ನೇ ವರ್ಷದಲ್ಲಿ ಇಬ್ಬರು ಮಕ್ಕಳ ತಾಯಿಯಾಗಿದ್ದರು. ವೈಯಕ್ತಿಕ ಮತ್ತು ಆರ್ಥಿಕ ಸಮಸ್ಯೆಗಳ ಕಾರಣದಿಂದ ಅನೇಕಾನೇಕ ಸಮಸ್ಯೆಗಳನ್ನೂ ಎದುರಿಸಿದವರು.
2009ರಲ್ಲಿ ಅಂಬಿಕಾ ಕೇರಳದ ರಾಜ್ಯ ಸಾಕ್ಷರತಾ ಮಿಷನ್ ಮೂಲಕ ತಮ್ಮ ಶಿಕ್ಷಣವನ್ನು ಮತ್ತೆ ಆರಂಭ ಮಾಡಲು ಮನಸ್ಸು ಮಾಡುತ್ತಾರೆ. ಮನಸ್ಸೊಂದಿದ್ದರೆ ಯಾವುದೂ ಅಸಾಧ್ಯ ಅಲ್ಲ ಎನ್ನುವುದನ್ನು ಸಾಧಿಸಿ ತೋರಿಸುತ್ತಾರೆ. ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗುತ್ತಾರೆ. 2018ರಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾಗುತ್ತಾರೆ. 40ನೇ ವರ್ಷದಲ್ಲಿ 5 ವರ್ಷಗಳ ಅವಧಿಯ ಎಲ್‌ಎಲ್‌ಬಿ ಕೋರ್ಸ್‌ಗೆ ಸೇರುತ್ತಾರೆ. ಆರ್ಥಿಕ, ಕೌಟುಂಬಿಕ, ಆರೋಗ್ಯ ಸಮಸ್ಯೆಗಳಂತಹ ಸವಾಲುಗಳ ನಡುವೆ ರೈಲಿನ ಮೂಲಕ ದೀರ್ಘ ಪ್ರಯಾಣ ಮಾಡಿ ಎರ್ನಾಕುಲಂನಲ್ಲಿರುವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಾರೆ.
ಪರಿಣಾಮ 2025ರ ಜೂನ್ 1ರಂದು ಅವರು ಕೇರಳದ ಬಾರ್ ಕೌನ್ಸಿಲ್‌ಗೆ ಸೇರಿಕೊಳ್ಳುತ್ತಾರೆ. ಬದುಕಿಗೆ ಶಿಕ್ಷಣ ಘನತೆಯನ್ನು ನೀಡುತ್ತದೆ. ದೃಢ ನಿಶ್ಚಯ ಒಂದಿದ್ದರೆ ಸಾಕು, ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಎಂ. ಅಂಬಿಕಾ ಅವರ ಈ ಯಶೋಗಾಥೆ ನಿದರ್ಶನ ಎನ್ನಬಹುದು.
ಶಿಕ್ಷಣ ಪಡೆಯಬೇಕು ಎಂಬ ದೃಢ ನಿರ್ಧಾರವೇ ನನ್ನ ಕನಸು ನನಸಾಗಲು ಕಾರಣ. ಇಲ್ಲದಿದ್ದರೆ ನಾನು ಕೇವಲ ಗೃಹಿಣಿಯಾಗಿ ಮಾತ್ರ ಇರುತ್ತಿದ್ದೆ. ಸಮಾಜದಲ್ಲಿ ಒಬ್ಬ ವ್ಯಕ್ತಿಯ ಘನತೆಯೇನು ಎನ್ನುವುದನ್ನು ಶಿಕ್ಷಣ ಹೇಳುತ್ತದೆ. ಈ ವಯಸ್ಸಿನಲ್ಲಿ ಶಿಕ್ಷಣ ಪಡೆಯಲು ಹೊರಟ ನನ್ನನ್ನು ಸಮಾಜದ ಹಲವರು ಅಪಹಾಸ್ಯ ಮಾಡಿದರು. ಆದರೆ ನಾನು ನನ್ನ ಕುಟುಂಬದ ಸಹಕಾರದಿಂದ ಕನಸು ನನಸಾಗಿಸಿದ್ದೇನೆ. ನನ್ನ ದೃಢಸಂಕಲ್ಪ ನನ್ನನ್ನು ಬಲಪಡಿಸಿತು ಎನ್ನುತ್ತಾರೆ ಅಂಬಿಕಾ.
ಕನಸುಗಳನ್ನು ಧೈರ್ಯದಿಂದ ಬೆನ್ನಟ್ಟಿ ಹೊರಟರೆ ಗುರಿ ತಲುಪುವುದು ಅಸಾಧ್ಯದ ಮಾತಲ್ಲ. ಅದಕ್ಕೆ ವಯಸ್ಸಿನ ಅಂತರವಿಲ್ಲ. ಮನಸ್ಸಷ್ಟೇ ಮುಖ್ಯ. ಮನಸ್ಸಿಗೆ ಮುಪ್ಪು ಅವರಿಸಬಾರದಷ್ಟೇ. ವಕೀಲೆ ಎಂ. ಅಂಬಿಕಾ ಬದುಕು ನಮ್ಮೆಲ್ಲರಿಗೂ ಬೆಳಕಾಗಿರಲಿ.
ಭುವನ ಬಾಬು ಪುತ್ತೂರು


























tdffy5
38t16x
nek6mv
6gx350
hka46q
ekrtmj
ha3ppy
dirva3
clcoe9
wq8qbb