ಪುತ್ತೂರು: ಯೋಗ ಎನ್ನುವುದು ಮಾನವನ ಶಾರೀರಿಕ ,ಬೌದ್ಧಿಕ, ಮತ್ತು ಮಾನಸಿಕ ವಿಕಾಸಕ್ಕೆ ಅತಿ ಅವಶ್ಯಕವಾಗಿದ್ದು, ಅದು ಅತಿ ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು ಎಂದು ಪುತ್ತೂರು ಓಂಕಾರ ಯೋಗ ಕೇಂದ್ರದ ಮುಖ್ಯಸ್ಥ ಕರುಣಾಕರ ಉಪಾಧ್ಯಾಯ ಹೇಳಿದರು.

ಅವರು ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವೆಂದರೆ ಏಕ ಸೂತ್ರದಲ್ಲಿ ಕೆಲಸ ಮಾಡುವುದು. ನಾವು ಮಾಡುವ ಕರ್ಮಗಳಲ್ಲಿ ಏಕ ಚಿತ್ತದಿಂದ ತಲ್ಲಿನರಾದಾಗ ನಮ್ಮ ಮನಸ್ಸು ಆರೋಗ್ಯ ಸದೃಢವಾಗಲು ಸಾಧ್ಯ .ಈ ಹಿನ್ನೆಲೆಯಲ್ಲಿ ಅಷ್ಟಾಂಗ ಯೋಗದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡು ಯೋಗಭ್ಯಾಸವನ್ನು ನಮ್ಮ ದಿನನಿತ್ಯದಲ್ಲಿ ರೂಢಿಸಿಕೊಂಡು ಮುಂದುವರಿಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿ ಮಾತನಾಡಿ, ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಯೋಗ ಹಾಗೂ ಪ್ರಾಣಯಾಮ ಅತ್ಯಂತ ಅಗತ್ಯ ಇದರಿಂದ ಒತ್ತಡ ರಹಿತ ಬದುಕನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ದಿನನಿತ್ಯ ಯೋಗ ಅಭ್ಯಾಸವನ್ನು ಮಾಡೋಣ ಎಂದರು.
ಸಂಚಾಲಕ ಎ.ವಿ. ನಾರಾಯಣ್ ಯೋಗ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಉಮೇಶ್ ಮಲುವೇಲು, ಶಾಲಾ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸೌಮ್ಯಶ್ರೀ ಹೆಗಡೆ, ಶಾಲಾ ನಿರ್ದೇಶಕರಾದ ಗಂಗಾಧರ ಗೌಡ, ಸೀತಾರಾಮ ಪೂಜಾರಿ, ಪ್ರಾಂಶುಪಾಲ ಅಮರನಾಥ್ ಬಿ.ಪಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಬೋಧಕ -ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಯೋಗ ಶಿಕ್ಷಕಿ ಶ್ರೀಮತಿ ಯಶುಭ ರೈ ರವರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಕ ವೃಂದದ ಸಹಕಾರದೊಂದಿಗೆ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.
ವಿದ್ಯಾರ್ಥಿನಿಯರಾದ ಕುಮಾರಿ ಆದ್ಯ, ಶಿವಾನಿ, ಜೋಶ್ನ ಅದ್ವಿತಿ, ಚಾರ್ವಿ ಡಿ. ಪ್ರಾರ್ಥಿಸಿದರು. ಶಿಕ್ಷಕಿ ಸವಿತಾ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಕುಮಾರಿ ಪ್ರಕ್ಷುತ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ಸುಚಿತ ವಂದಿಸಿದರು. ಶಿಕ್ಷಕಿ ರಂಜಿತ ರೈ ಕಾರ್ಯಕ್ರಮ ನಿರೂಪಿಸಿದರು.
























