ವಿಶ್ವದ ಕೋಟ್ಯಂತರ ಜೀವನ ಶೈಲಿ ಬದಲಿಸಿದ ಯೋಗ : ನರೇಂದ್ರ ಮೋದಿ

ವಿಶಾಖಪಟ್ಟಣಂನಲ್ಲಿ 3 ಲಕ್ಷ ಜನರ ಜೊತೆ ಪ್ರಧಾನಿ ಯೋಗ

ವಿಶಾಖಪಟ್ಟಣಂ : ಯೋಗ ಇಂದು ವಿಶ್ವವನ್ನು ಒಗ್ಗೂಡಿಸಿದೆ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಯೋಗ ಅಂದರೆ ಒಬ್ಬರಿಗಾಗಿ ಅಲ್ಲ ಎಲ್ಲರಿಗಾಗಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಶೀರ್ಷಿಕೆಯಡಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಯೋಗ ವಿಶ್ವಾದ್ಯಂತ ಒಂದು ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಹೇಳಿದರು.

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್‌.ಕೆ. ಬೀಚ್‌ನಿಂದ ಭೋಗಪುರಂವರೆಗೆ 26 ಕಿ.ಮೀ. ಉದ್ದದ ಕಾರಿಡಾರ್​​​ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಏಕಕಾಲದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರ ಜತೆ ಮೋದಿ ಯೋಗ ಮಾಡಿದರು.





















































 
 

ದೇಶದ ಜನತೆಗೆ ಯೋಗ ದಿನಾಚರಣೆಯ ಶುಭಾಶಯ ತಿಳಿಸಿ ಮಾತನಾಡಿದ ಮೋದಿ, ಇಂದು 175 ದೇಶಗಳು ಯೋಗ ದಿನ ಆಚರಣೆ ಮಾಡುತ್ತಿವೆ. ಮಾನಸಿಕ, ದೈಹಿಕ ಆರೋಗ್ಯ ಕಾಪಾಡಲು ಯೋಗ ನೆರವಾಗಲಿದೆ. ಯೋಗ ಎಂದರೆ ಎಲ್ಲರೂ ಒಂದಾಗುವುದು ಎಂದರ್ಥ. ಇಡೀ ವಿಶ್ವವೇ ಯೋಗ ದಿನ ಆಚರಿಸುತ್ತಿರುವುದು ಸಾಧಾರಣ ವಿಷಯವಲ್ಲ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ. ಮನುಷ್ಯ ಶಿಸ್ತುಬದ್ಧ ಜೀವನ ನಡೆಸಲು ಯೋಗ ಸಹಕಾರಿಯಾಗಲಿದೆ ಎಂದರು.

ಮಾನವೀಯತೆ, ಶಾಂತಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ನೆರವಾಗಲಿದೆ. ಯೋಗ ಹಲವು ದೇಶಗಳ ಜೊತೆ ಬಾಂಧವ್ಯ ವೃದ್ಧಿಗೆ ನೆರವಾಗಿದೆ. ನೌಕಾಪಡೆ ಸಿಬ್ಬಂದಿ ನೌಕೆಯಲ್ಲೇ ಯೋಗಾಸನ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ಕೂಡ ಯೋಗಾಸನ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಮಾತನಾಡಿ, ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲಬೇಕು. 2014ರ ಜೂನ್ 21ರಂದು ವಿಶ್ವಸಂಸ್ಥೆ ಯೋಗ ದಿನವನ್ನು ಘೋಷಿಸಿತು. ಇಂದು ಜನ ಯೋಗಾಸನ ಮಾಡುತ್ತಿದ್ದಾರೆ. ಮಾನಸಿಕ, ದೈಹಿಕ ಆರೋಗ್ಯ ಸುಧಾರಣೆಗೆ ಯೋಗಾಸನ ಸಹಾಯಕವಾಗಲಿದೆ ಎಂದರು.

ಸೆಪ್ಟೆಂಬರ್​​ನಿಂದ ಯೋಗ ಸೂಪರ್ ಲೀಗ್ ಕಾರ್ಯಕ್ರಮ ಆರಂಭವಾಗಲಿದೆ. ಶುಕ್ರವಾರ 22 ಸಾವಿರ ಗಿರಿಜನ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಿದರು. ಈ ಮೂಲಕ ಗಿರಿಜನ ವಿದ್ಯಾರ್ಥಿಗಳು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಯೋಗಾಸನದಲ್ಲಿ 5 ಲಕ್ಷ ಜನ ಭಾಗಿಯಾಗಿ ಗಿನ್ನೆಸ್ ದಾಖಲೆ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾತನಾಡಿ, ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ್ದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ಅವರು ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಇದರಿಂದಾಗಿ ಈ ದಿನವನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top