ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣ ಎಣಿಕ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಗಳೇ ಲೋಪ ಎಸಗಿರುವ ಆರೋಪ ಕೇಳಿ ಬಂದಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಸೌತಡ್ಕದ, ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ದಿನವೊಂದರಲ್ಲಿ, ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು ಲಕ್ಷಾಂತರ ರೂ.ಕಾಣಿಕೆ ಸಂದಾಯವಾಗುತ್ತಿದೆ. ಕಾಣಿಕೆ ರೂಪದಲ್ಲಿ ಭಕ್ತರಿಂದ ಸಂದಾಯವಾಗುವ ಹಣಗಳ ಎಣಿಕೆ ಪ್ರತಿ ತಿಂಗಳೂ ನಡೆಯುತ್ತದೆ. ಎಣಿಕೆ ಮಾಡಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ವೊಂದರ ಕೊಕ್ಕಡ ಶಾಖೆಯಲ್ಲಿ ಜಮೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಬ್ಯಾಂಕ್ ಸಿಬ್ಬಂದಿಗಳ ಹಣ ಎಣಿಕೆ ಯಂತ್ರದೊಂದಿಗೆ ದೇವಸ್ಥಾನಕ್ಕೆ ಬಂದು ಹಣ ಸಂಗ್ರಹಿಸಿಕೊಂಡು ಹೋಗುತ್ತಾರೆ. ದೇವಸ್ತಾನದ ಸಿಬ್ಬಂದಿಗಳ ಜೊತೆ ಗ್ರಾಮದ ಇತರೇ ಭಕ್ತರೂ ಸ್ವಯಂ ಸೇವಕರಾಗಿ ಸೇರಿಕೊಂಡು ಹಣ ಎಣಿಕೆಗೆ ಸಹಕಾರ ನೀಡುತ್ತಾರೆ.
ಜೂ.20 ಶುಕ್ರವಾರ ಹಣ ಎಣಿಕೆ ಸಂದರ್ಭದಲ್ಲಿ, ಬ್ಯಾಂಕ್ ಸಿಬ್ಬಂದಿಗಳು ಯಂತ್ರದ ಮೂಲಕ ತಲಾ 100 ನೋಟ್ಗಳಂತೆ ಬಂಡಲ್ ಮಾಡಿ ಜೋಡಿಸಿಟ್ಟಿದ್ದ ಬಂಡಲ್ ವೊಂದನ್ನು ದೇವನಾನದ ವ್ಯವಸಾಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಶಬರಾಯ ಅವರು ಕೈಯಲ್ಲಿ ಮರು ಎಣಿಕೆ ಮಾಡಿದ ವೇಳೆ ಅದರಲ್ಲಿ ಏಳೆಂಟು ನೋಟ್ಗಳು ಹೆಚ್ಚುವರಿ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಗಳನ್ನು ಪ್ರಶ್ನಿಸಿದಾಗ ನೋಟ್ಗಳು ಒದ್ದೆಯಾಗಿರುವುದರಿಂದ ಬಂಡಲ್ನಲ್ಲಿ ಹೆಚ್ಚು ಹೋಗಿರಬಹುದು ಎಂದು ಉತ್ತರಿಸಿದ್ದಾರೆ. ಆದರೆ ಇದರಿಂದ ಸಮಾಧಾನಗೊಳ್ಳದ ಅಧ್ಯಕ್ಷರು, ದೇವಸ್ಥಾನದ ಸಿಬ್ಬಂದಿಗಳ ಮೂಲಕ ಕೆಲವೊಂದು ಹಣದ ಬಂಡಲ್ಗಳನ್ನು ಮತ್ತೆ ಎಣಿಕೆ ಮಾಡಿಸಿದ್ದಾರೆ. ಈ ವೇಳೆಯೂ ಬಹುತೇಕ ಬಂಡಲ್ಗಳಲ್ಲಿ ನಾಲ್ಕರಿಂದ ಎಂಟು ನೋಟ್ಗಳ ತನಕ ಹೆಚ್ಚುವರಿಯಾಗಿ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಡುಗಳ ಎಲ್ಲ ಬಂಡಲ್ಗಳನ್ನು ದೇವಸ್ಥಾನದ ಸಿಬ್ಬಂದಿಗಳೇ ಎಣಿಕೆ ಮಾಡಿ ಬ್ಯಾಂಕ್ ಜಮೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಎಣಿಕೆ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯವರು ಉಪಸ್ಥಿತರಿದ್ದರು.
ದೇವಸ್ನಾನದ ಕಾಣಿಕೆ ಡಬ್ಬಿಯ ಹಣ ಎಣಿಕೆ ವೇಳೆ ಬ್ಯಾಂಕ್ ಸಿಬ್ಬಂದಿಗಳು ಗೋಲ್ಮಾಲ್ ಮಾಡುತ್ತಿರುವ ಬಗ್ಗೆ, ನಮಗೆ ಮಾಹಿತಿ ಸಿಕ್ಕಿತ್ತು. ನಮ್ಮ ವ್ಯವಸ್ಥಾಪನಾ ಸಮಿತಿ ಅಧಿಕಾರಕ್ಕೆ ಬಂದ ಬಳಿಕ ಜೂ.20ರಂದು ಮೊದಲ ಬಾರಿಗೆ ಹುಂಡಿ ಹಣ ಎಣಿಕೆ ನಡೆದಿದೆ. ಅನುಮಾನದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳು ಯಂತ್ರದ ಮೂಲಕ ಎಣಿಕೆ ಮಾಡಿ ಜೋಡಿಸಿಟ್ಟಿದ್ದ ಬಂಡಲ್ವೊಂದನ್ನು ಕೈಯಲ್ಲಿ ಒಂದೊಂದೇ ನೋಟುಗಳಂತೆ ಎಣಿಕೆ ಮಾಡಿದಾಗ ಏಳೆಂಟ್ ನೋಟು ಹೆಚ್ಚುವರಿ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನೋಟಿನ ಕಂತೆಗಳನ್ನು ದೇವಸ್ಥಾನದ ಸಿಬ್ಬಂದಿಗಳ ಸಹಾಯದಿಂದ ಮರು ಎಣಿಕೆ ಮಾಡಿಸಿದ್ದೇವೆ. ಈ ವೇಳೆಯೂ ಬಂಡಲ್ಗಳಲ್ಲಿ ಹೆಚ್ಚುವರಿ ನೋಟು ಇರುವುದು ಪತ್ತೆಯಾಗಿದೆ. ಬಳಿಕ ಎಲ್ಲಾ ಕಂತೆಗಳನ್ನು ಸಿಬ್ಬಂದಿಗಳಿಂದಲೇ ಎಣಿಕೆ ಮಾಡಿಸಿ ಬ್ಯಾಂಕ್ಗೆ ಜಮೆ ಮಾಡಲಾಗಿದೆ. ಅವ್ಯವಹಾರವೆಸಗಿರುವ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಮುಜರಾಯಿ ಇಲಾಖೆಗೆ ಜೂ.21 ದೂರು ನೀಡಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ತಿಳಿಸಿದ್ದಾರೆ.
























