‘ಒಂದು ಭೂಮಿ ಒಂದು ಆರೋಗ್ಯ’ ಎಂಬ ರಾಷ್ಟ್ರೀಯ ಘೋಷ ವಾಕ್ಯದೊಂದಿಗೆ ನಮ್ಮ ಭಾರತದ ನೇತೃತ್ವದಲ್ಲಿ ವಿಶ್ವಾದ್ಯಂತ ನಡೆಯಲಿರುವ ಯೋಗ ದಿನಾಚರಣೆ, ಯೋಗ ಸಂಗಮದ ವಾರ್ಷಿಕ ವಸಂತಕಾಲ ಮತ್ತೆ ಕೂಡಿಬಂದಿದೆ, ಇಂದು 21 ಜೂನ್ 2025ರಂದು.
ಮೊದಲ ಯೋಗ ಶಿಕ್ಷಕ
ಆದಿ ಯೋಗಿ ಶಿವ
ಯೋಗ ವಿಜ್ಞಾನದ ಮೊದಲ ಶಿಕ್ಷಕ ಯೋಗಿ ಶಿವ ಎಂದು ಹೇಳಲಾಗುತ್ತದೆ. ಶಿವಾನುಗ್ರಹದ ಯೋಗ ವಿದ್ಯೆಯನ್ನು ಮಹರ್ಷಿ ಪತಂಜಲಿ ಲೋಕಾರ್ಪಣೆಗೊಳಿಸಿದರು. ಈ ಮಹಾವಿದ್ಯೆಯು ಜಾತಿ, ಮತ, ದೇಶ, ಕಾಲಗಳ ವ್ಯಾಪ್ತಿಯನ್ನು ಮೀರಿ ಸರ್ವರಿಗೂ ಸಲ್ಲುವಂತಹ ಜೀವನ ಕಲೆಯಾಗಿದೆ. ಆಧ್ಯಾತ್ಮಿಕ ಸಾರವೇ ಯೋಗದ ಮೂಲ ಧಾತು. ಇಂತಹ ಅಮೂಲ್ಯ ವಿದ್ಯೆಯು ವಿಶ್ವವ್ಯಾಪ್ತಿಯಾಗಿ ಜನ ಜೀವನದಲ್ಲಿ ಜೀವನ ಕಲೆಯಾಗಿ ಬೆರೆತು ದೇಹ ಹಾಗೂ ಮನಸ್ಸನ್ನು ಜೋಡಿಸುತ್ತದೆ. ಮನುಕುಲದ ಸಮೃದ್ಧಿಯನ್ನು ಸಾಕಾರಗೊಳಿಸುತ್ತದೆ.
ಸಾಧನಾ ಪಥವಾಗಬೇಕು
ಯೋಗ ವಿದ್ಯೆಯು ಸಾಧಕನ ಸಾಧನಾ ಪಥವಾಗಬೇಕು. ವಿಶ್ವದ ಅತಿ ಸಾಮಾನ್ಯ ವ್ಯಕ್ತಿಗೂ ಯೋಗ ಸ್ಪರ್ಶವಾಗಬೇಕು ಎಂಬ ಘನ ಉದ್ದೇಶದಿಂದ ಪ್ರತಿ ವರ್ಷವೂ ಜೂನ್ 21ರಂದು ನಾವೆಲ್ಲರೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತೇವೆ.
ಜೂನ್ 21ರ ಮಹತ್ತ್ವ
ಯೋಗಾಭ್ಯಾಸದ ಆಚರಣೆಯ ದಿನವನ್ನಾಗಿ ಜೂನ್ 21ನ್ನು ಆಯ್ಕೆ ಮಾಡಿಕೊಳ್ಳಲು ಕನಿಷ್ಠ ಎರಡು ಕಾರಣಗಳಿವೆ.
ಮೊದಲ ಕಾರಣವು ಅಧ್ಯಾತ್ಮ, ಪೌರಾಣಿಕ ಆಧಾರಿತವಾದದ್ದು. ಪುರಾಣ ಪ್ರಸಿದ್ಧ ಪತಂಜಲಿ ಮಹರ್ಷಿ ಪ್ರವಚಿತವಾದ ಈ ಯೋಗ ವಿದ್ಯೆಯು ಅವರಿಂದ ಜೂನ್ 21ರಂದು ಲೋಕಮುಖಕ್ಕೆ ನೀಡಲ್ಪಟ್ಟಿತು. ಇಂದು, ಸದರಿ ದಿನವು, ಅಂತರಾಷ್ಟ್ರೀಯ ಯೋಗ ಆಚರಣೆಯ ದಿನ ಎಂಬ ಮಟ್ಟಕ್ಕೆ ಏರಿ ಬಹಳ ಮಹತ್ತ್ವವನ್ನು ಪಡೆದಿದೆ. ಇದು ಭಾರತಕ್ಕೆ ಸಲ್ಲುವ ಹೆಮ್ಮೆ.
ಎರಡನೆಯ ಕಾರಣ ಇನ್ನೊಂದು ರೋಚಕ ವೈಜ್ಞಾನಿಕ ಸಂಗತಿಯನ್ನು ಆಧರಿಸಿದ್ದು. ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ನಮ್ಮ ಈ ಭೂಮಿಯ ಚಲನೆಗೆ ಅನುಸಾರವಾಗಿ ಹಗಲು ರಾತ್ರಿಗಳು ಆಗುತ್ತವೆ ಎಂಬುದು ನಾವೆಲ್ಲ ತಿಳಿದಿರುವ ವಿಚಾರ. ಜೂನ್ 21ರ ಈ ದಿನದಂದು ಸ್ಥಳೀಯ ಕಾಲಮಾನಕ್ಕನುಗುಣವಾಗಿ ಬೆಳಗ್ಗೆ ಗಂಟೆ 6.06ಕ್ಕೆ ಸೂರ್ಯೋದಯವಾಗಿ ಸಂಜೆ ಗಂಟೆ 6.55ಕ್ಕೆ ಸೂರ್ಯಾಸ್ತವಾಗುತ್ತದೆ. ಅಂದರೆ 13 ಗಂಟೆಗಳ ದೀರ್ಘಾವಧಿ ಹಗಲು ಇರುತ್ತದೆ. ಉತ್ತರ ವಲಯದಲ್ಲಿರುವ ಅಮೇರಿಕಾ ಮುಂತಾದ ರಾಷ್ಟ್ರಗಳಲ್ಲಿ ಹಗಲು ಇನ್ನೂ ದೀರ್ಘವಾಗಿರುತ್ತದೆ. ಆದ್ದರಿಂದ ಈ ದಿನ ಅತಿ ಹೆಚ್ಚಿನ ಕಾಲಾವಧಿಯ ತನಕ ಸೂರ್ಯಕಿರಣಗಳು ಭೂಮಿಯನ್ನು ಸ್ಪರ್ಶಿಸುತ್ತವೆ.
ದಕ್ಷಿಣಾಯನ – ಉತ್ತರಾಯಣ
ಇಂದಿನಿಂದ ದಕ್ಷಿಣ ಕಡೆಗೆ ಸೂರ್ಯನ ಅಯನ ಆರಂಭವಾಗುತ್ತದೆ. ಡಿಸೆಂಬರ್ 21ರ ತನಕ ಅದು ಮುಂದುವರಿಯುತ್ತದೆ. ಅಂದು ಅತ್ಯಂತ ದೀರ್ಘವಾದ ರಾತ್ರಿ ಇರುತ್ತದೆ. ಆ ದಿನದಿಂದ ಮತ್ತೆ ಸೂರ್ಯನ ಉತ್ತರ ಅಯನ ಆರಂಭ. ಇದು ಭೌಗೋಳಿಕ ನಿಯಮ.
ನಮ್ಮ ಯೋಗ – ನಮ್ಮ ದೇಶ – ನಮ್ಮ ಹೆಮ್ಮೆ
ನಮ್ಮ ನಾಡಿನ ಈ ಯೋಗ ವಿದ್ಯೆಯ ಅಭ್ಯಾಸವನ್ನು ವಿಶ್ವ ಮಟ್ಟದ ಆಚರಣೆಯ ಮೂಲಕ ಇಷ್ಟೊಂದು ಉತ್ತುಂಗಕ್ಕೆ ಏರಿಸಿದ ಈ ನಮ್ಮ ರಾಷ್ಟ್ರ, ಭಾರತ, ನಿಜಕ್ಕೂ ಮಹಾನ್. ನಮ್ಮ ಹೆಮ್ಮೆಯ ಪ್ರಧಾನಿ ಮೋದೀಜಿಯವರ ನೇತೃತ್ವದಲ್ಲಿ ನಮ್ಮ ಭಾರತ ಇಂದು ವಿಶ್ವಗುರುವಾಗುವತ್ತ ಮುನ್ನಡೆಯುತ್ತಿದೆ. ಈ ನಡಿಗೆಗೆ ಯೋಗ ವಿದ್ಯೆಯೂ ಸಹ ಯೋಗದಾನವನ್ನು ನೀಡುತ್ತಿರುವುದು ಸತ್ಯ. ಇದು ನಮ್ಮೆಲ್ಲರ ಹೆಮ್ಮೆ.
ಘೋಷ ವಾಕ್ಯ
ಈ ವರ್ಷದ ಘೋಷ ವಾಕ್ಯ ‘ಒಂದು ಭೂಮಿ ಒಂದು ಆರೋಗ್ಯ’ ಎಂಬುದು ನಮ್ಮ ಪ್ರಧಾನಿಯವರ ಪರಿಕಲ್ಪನೆಯಾಗಿದೆ. ಈ ರೀತಿ ಯೋಗದ ಮಹತ್ತ್ವವನ್ನು ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟ ನಮ್ಮ ನೆಚ್ಚಿನ ಪ್ರಧಾನಿಯವರು ವಿಶ್ವದಲ್ಲೇ ಅಭಿನಂದನೀಯರು.
ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿ ಯೋಗವನ್ನು ನಮ್ಮ ನೈಮಿತ್ತಿಕ ಅಭ್ಯಾಸವನ್ನಾಗಿಸಿಕೊಳ್ಳುವ ಮೂಲಕ ನಾವೆಲ್ಲರೂ ಯೋಗ್ಯ, ಆರೋಗ್ಯವಂತ, ಭಾರತೀಯ ಪ್ರಜೆಗಳಾಗಿ ಬಾಳೋಣ. ಭಾರತವನ್ನು ಆರೋಗ್ಯವಂತವನ್ನಾಗಿಸೋಣ.
ಜೈ ಭಾರತ್.
ಯಶುಭ ರೈ
ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್, ಬನ್ನೂರು, ಪುತ್ತೂರು
























