ಪತ್ನಿ ಮೊಬೈಲ್ ಅತಿಯಾಗಿ ಬಳಸುತ್ತಾಳೆಂದು ಜಗಳವಾಡಿ ಕೊಲೆ
ಉಡುಪಿ : ಪತ್ನಿ ಅತಿಯಾಗಿ ಮೊಬೈಲ್ ಉಪಯೋಗಿಸುತ್ತಾಳೆ ಎಂದು ಸಿಟ್ಟಿನಿಂದ ಪತಿಯೇ ಆಕೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉಡುಪಿ ಸಮೀಪ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಆರೋಪಿ ಪತಿ ಗಣೇಶ್ ಪೂಜಾರಿಯು ತನ್ನ ಪತ್ನಿ ರೇಖಾಳನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ ಆರೋಪಿ ಗಣೇಶ್ ಪೂಜಾರಿ ವಿಪರೀತ ಮದ್ಯ ವ್ಯಸನಿಯಾಗಿದ್ದ. ಪತ್ನಿ ರೇಖಾ ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಾಳೆ ಎಂದು ಸಿಟ್ಟಿನಿಂದ ಗುರುವಾರ ರಾತ್ರಿ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದು ಹೆಂಡತಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಜಗಳ ಉಲ್ಬಣಗೊಂಡು ರಾತ್ರಿ 11.30ರ ಸುಮಾರಿಗೆ ಕತ್ತಿಯಿಂದ ಹಲ್ಲೆ ಮಾಡಿ ಪರಿಣಾಮವಾಗಿ ಆಕೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣೇಶ್ ಪೂಜಾರಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
























