ಹಿಂದು ಮುಖಂಡರ ಮನೆ ಮಧ್ಯರಾತ್ರಿ ತಪಾಸಣೆ : ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಮನೆ ಶೋಧಿಸಿದ ಪ್ರಕರಣ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ದಿನಗಳಲ್ಲಿ ಮಧ್ಯರಾತ್ರಿ ಹಿಂದು ಮುಖಂಡರ ಮನೆಗಳಿಗೆ ಹೋಗಿ ತಪಾಸಣೆ ಮಾಡಿದ್ದ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಯಾವುದೇ ಕಾರಣವಿಲ್ಲದೆ ಮಧ್ಯರಾತ್ರಿ ವೇಳೆ ಆರ್​ಎಸ್​​ಎಸ್ ನಾಯಕರೊಬ್ಬರ ಮನೆಗೆ ಪೊಲೀಸರು ಹೋಗಿ ಫೋಟೊ ತೆಗೆದು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್​​ಪಿ ಅರುಣ್​ಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿ ಸೂಕ್ತ ದಾಖಲೆ ಸಲ್ಲಿಸುವಂತೆ ತಾಕೀತು ಮಾಡಿದೆ. ಜತೆಗೆ ಆರ್​ಎಸ್​​ಎಸ್ ಮುಖಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದೆ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಘಟನೆ ನಂತರ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಗೊಂಡಿತ್ತು. ಆದರೆ ಯಾವುದೇ ಪ್ರಕರಣದಲ್ಲಿ ಶಾಮೀಲಾಗಿರದ ಆರ್​​ಎಸ್​ಎಸ್ ಹಾಗೂ ಹಿಂದೂ ಮುಖಂಡರ ಮನೆಗಳಿಗೆ ರಾತ್ರಿ ವೇಳೆ ತೆರಳಿ ತಪಾಸಣೆ ನೆಪದಲ್ಲಿ ಫೋಟೊ ತೆಗೆದಿದ್ದರು.





















































 
 

ಪೊಲೀಸರ ಈ ನಡೆಗೆ ಹಿಂದು ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕ ಪೊಲೀಸ್ ರಾಜ್ಯವಾಗುವತ್ತ ಸಾಗುತ್ತಿದೆಯಾ ಎಂದು ಹಿಂದೂ ನಾಯಕರು ಪ್ರಶ್ನಿಸಿದ್ದರು. ಈ ವಿಚಾರವಾಗಿ ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜೂನ್ 1ರಂದು ಯು.ಜಿ. ರಾಧಾ ಅವರ ಉಪ್ಪಿನಂಗಡಿ ಮನೆಗೆ ರಾತ್ರಿ ಬಂದಿದ್ದ ಪೊಲೀಸರು ಫೋಟೊ ತೆಗೆದು ಅಪ್​​ಲೋಡ್ ಮಾಡಿದ್ದರು. ಈ ಸಂದರ್ಭ ನಮಗೆ ಹಿರಿಯ ಅಧಿಕಾರಿಗಳ ಆದೇಶವಿದೆ ಎಂದು ಪೊಲೀಸರು ಹೇಳಿದ್ದರು. ಆದರೆ ದಾಖಲೆ ತೋರಿಸಿರಲಿಲ್ಲ.

ವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಪೊಲೀಸರು ವಿನಾ ಕಾರಣ ಕಸಿದಿದ್ದಾರೆ ಎಂದು ಯು.ಜಿ. ರಾಧಾ ಹೈಕೋರ್ಟ್ ಮೊರೆ ಹೋಗಿದ್ದರು. ಆರೋಪಿಯ ರೀತಿ ನನ್ನನ್ನು ಪೊಲೀಸರು ನಡೆಸಿಕೊಂಡಿದ್ದು, ಇದರಿಂದ ನನ್ನ ಖಾಸಗಿತನ, ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ಈ ಮೂಲಕ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ಹೀಗಾಗಿ ನನಗೆ 20 ಲಕ್ಷ ರೂ. ಮಾನನಷ್ಟ ಪರಿಹಾರ ನೀಡುವಂತೆ ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್‌ ದತ್ ಯಾದವ್ ಅವರ ಏಕಸದಸ್ಯ ಪೀಠ, ದಕ್ಷಿಣ ಕನ್ನಡ ಜಿಲ್ಲಾ ಎಸ್​​ಪಿಗೆ ನೋಟಿಸ್ ನೀಡಿದೆ. ದೂರುದಾರರ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು. ಯು.ಜಿ.ರಾಧಾ ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಪ್ರತ್ಯೇಕ ದೂರು ನೀಡಿದ್ದಾರೆ. ಈಗಾಗಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಜಿಲ್ಲಾ ಎಸ್​​​ಪಿಗೆ ನೋಟಿಸ್‌ ಜಾರಿ ಮಾಡಿದೆ. ಬೇರೆ ಬೇರೆ ದೂರುಗಳ ಆಧಾರದಲ್ಲಿ ನೊಟೀಸ್ ನೀಡಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top