ಇರಾನ್‌ ಮೆಲೆ ದಾಳಿಗೆ ಅಮೆರಿಕ ಸಿದ್ಧತೆ : ಫೈಟರ್‌ ಜೆಟ್‌, ಸಮರ ನೌಕೆ ರವಾನೆ

90 ಮೀಟರ್‌ ಆಳದಲ್ಲಿದೆ ಯುರೇನಿಯಂ ಸಂಗ್ರಹ; ಇಸ್ರೇಲ್‌ನ ಶಸ್ತ್ರ ಭಂಡಾರ ಖಾಲಿ?

ಟೆಲ್‌ ಅವೀವ್‌: ಇಸ್ರೇಲ್‌-ಇರಾನ್‌ ಸಮರ 7ನೇ ದಿನ ಪ್ರವೇಶಿಸುತ್ತಿದ್ದಂತೆಯೇ ಇರಾನ್‌ ಮೇಲೆ ದಾಳಿ ಮಾಡಲು ಅಮೆರಿಕ ಸಜ್ಜಾಗುತ್ತಿದೆ. ಅಮೆರಿಕದ ಫೈಟರ್‌ ಜೆಟ್‌ಗಳು, ಯುದ್ಧ ನೌಕೆಗಳು, ಇಂಧನ ಮರುಪೂರಣ ಟ್ಯಾಂಕ್‌ಗಳು ಈಗಾಗಲೇ ಮಧ್ಯಪೂರ್ವದತ್ತ ತೆರಳಿದ್ದು, ದೀರ್ಘಕಾಲದ ಯುದ್ಧಕ್ಕೆ ಅಮೆರಿಕ ಸಜ್ಜಾಗುತ್ತಿರುವುದರ ಮುನ್ಸೂಚನೆ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ ಶರಣಾಗತಿ ಎಚ್ಚರಿಕೆಗೆ ಇರಾನ್‌ನ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಡೋಂಟ್‌ಕೇರ್‌ ಎಂದಿದ್ದು, ಇಸ್ರೇಲ್‌ ಪೂರ್ಣ ನಾಶವಾಗುವ ತನಕ ಯುದ್ಧ ಮಾಡುತ್ತೇವೆ ಎಂದು ಹೇಳಿದ್ದಾರೆ. ಆ ಬಳಿಕ ಸಂಧಾನ ಮತ್ತು ಶರಣಾಗತಿಯ ಪ್ರಸ್ತಾವವನ್ನು ಕೈಬಿಟ್ಟಿರುವ ಟ್ರಂಪ್‌ ಯುದ್ಧಕ್ಕೆ ಮುಂದಾಗಿದ್ದಾರೆ.





















































 
 

ಇರಾನ್‌ ಮೇಲಿನ ದಾಳಿ ಯೋಜನೆಗೆ ಟ್ರಂಪ್ ಅನುಮೋದನೆ ನೀಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಅಂತಿಮ ಆದೇಶದ ನಂತರ ದಾಳಿ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಒಂದೊಮ್ಮೆ ಅಮೆರಿಕ, ಇಸ್ರೇಲ್​ ಹಾಗೂ ನಮ್ಮ ನಡುವಿನ ಯುದ್ಧದಲ್ಲಿ ಮಧ್ಯೆ ಬಂದರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನು ಖಮೇನಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್‌ ಶಸ್ತ್ರಾಸ್ತ್ರ ಖಾಲಿ

ಈ ನಡುವೆ ಕಳೆದ ಎರಡು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಯುದ್ಧ ಮಾಡುತ್ತಿರುವ ಇಸ್ರೇಲ್‌ನ ಶಸ್ತ್ರ ಭಂಡಾರ ಖಾಲಿಯಾಗಿದೆ ಎಂಬ ವರದಿಯೊಂದು ಬಂದಿದೆ. ಅಮೆರಿಕದ ಪ್ರಮುಖ ಪತ್ರಿಕೆಯೊಂದು ಯುದ್ಧ ಇದೇ ರೀತಿ ಮುಂದುವರಿದರೆ ಇಸ್ರೇಲ್‌ನ ಯುದ್ಧಾಸ್ತ್ರಗಳು 12-13 ದಿನಗಳಲ್ಲಿ ಖಾಲಿಯಾಗಲಿವೆ ಎಂದು ವರದಿ ಮಾಡಿದೆ.
ಮುಖ್ಯವಾಗಿ ಕ್ಷಿಪಣಿ ದಾಳಿಯನ್ನು ತಡೆಯುವ ನಿರೋಧಕ ವ್ಯವಸ್ಥೆ ಖಾಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ ಅಮೆರಿಕದ ಸಹಾಯ ಯಾಚಿಸಿದೆ ಎನ್ನಲಾಗಿದೆ.

90 ಮೀಟರ್‌ ಆಳದಲ್ಲಿ ಯುರೇನಿಯಂ ಸಂಗ್ರಹ

ಇರಾನ್‌ ನ್ಯೂಕ್ಲಿಯರ್‌ ಬಾಂಬ್‌ ತಯಾರಿಸಲು ಅಗತ್ಯವಿರುವ ಯುರೇನಿಯಂ ಅನ್ನು ಭೂಮಿಯಿಂದ ಸುಮಾರು 90 ಮೀಟರ್‌ ಭೂಗರ್ಭದ ಆಳದಲ್ಲಿ ಅತ್ಯಂತ ಸುರಕ್ಷಿತವಾಗಿ ಅಡಗಿಸಿಟ್ಟಿದೆ ಎನ್ನಲಾಗಿದೆ. ಇರಾನ್‌ನ ಫೋರ್ಟೊ ಎಂಬ ಪರ್ವತ ಶ್ರೇಣಿಯಲ್ಲಿ ಈ ಯುರೇನಿಯಂ ಬಚ್ಚಿಡಲಾಗಿದೆ. ಇದೊಂದು ಅಬೇಧ್ಯ ಕೋಟೆಯಾಗಿದ್ದು, ಸುಲಭದಲ್ಲಿ ಇಲ್ಲಿಗೆ ತಲುಪುವುದು ಸಾಧ್ಯವಿಲ್ಲ. ಇದನ್ನು ನಾಶ ಮಾಡಬೇಕಾದರೆ ಅತ್ಯಂತ ಬಲಿಷ್ಠ ಮತ್ತು ವಿಶೇಷ ಕ್ಷಿಪಣಿ ಅಗತ್ಯವಿದೆ. ಇದು ಇಸ್ರೇಲ್‌ ಬಳಿ ಇಲ್ಲ. ಇರಾನ್‌ನ ಇನ್ನೊಂದು ಯುರೇನಿಯಂ ಸಂಗ್ರಹ ಸ್ಥಾವರ ರಾಜಧಾನಿ ಟೆಹ್ರಾನ್‌ನಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ನತಾಂಝದಲ್ಲಿದೆ. ಆದರೆ ಇದು ಫೋರ್ಡೊದಷ್ಟು ಆಳದಲ್ಲಿ ಇಲ್ಲ ಎನ್ನಲಾಗಿದೆ.

ಅಮೆರಿಕದ ಗುರಿ ಇರುವುದು ಇರಾನ್‌ನ ಪರಮಾಣು ಅಸ್ತ್ರಗಳ ಮೇಲೆ. ಯಾವ ಕಾರಣಕ್ಕೂ ಇರಾನ್‌ ನ್ಯೂಕ್ಲಿಯರ್‌ ಬಾಂಬ್‌ ಹೊಂದಲು ಬಿಡುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಮೂಲಗಳ ಪ್ರಕಾರ ಇರಾನ್‌ ಮೇಲೆ ಇಸ್ರೇಲ್‌ ದಾಳಿ ಮಾಡುವಾಗ ಇರಾನ್‌ನ ಅಣ್ವಸ್ತ್ರ ತಯಾರಿ ಅಂತಿಮ ಹಂತಕ್ಕೆ ಬಂದಿತ್ತು. ಇನ್ನು ಕೆಲವು ವಾರ ಕಳೆದಿದ್ದರೆ ಇರಾನ್‌ ನ್ಯೂಕ್ಲಿಯರ್‌ ಬಾಂಬ್‌ ಹೊಂದಿದ ದೇಶಗಳ ಸಾಲಿಗೆ ಸೇರುತ್ತಿತ್ತು. ಇದು ಗೊತ್ತಾಗಿ ಕಳೆದ ಶುಕ್ರವಾರ ಇರಾನ್‌ನ ಅಣ್ವಸ್ತ್ರ ನೆಲೆಗಳು ಮತ್ತು ಸೇನಾ ಸ್ಥಾವರಗಳನ್ನು ಗುರಿಮಾಡಿಕೊಂಡು ಇಸ್ರೇಲ್‌ ದಾಳಿ ಶುರು ಮಾಡಿದೆ.

ಈ ಹಿನ್ನೆಲೆಯಲ್ಲಿ ಅಮೆರಿಕದ ಮಿಲಿಟರಿ ಹಸ್ತಕ್ಷೇಪಕ್ಕೆ ಬಲವಾಗಿ ಪ್ರತಿಕ್ರಿಯಿಸಲಾಗುವುದು, ಇದು ಅಮೆರಿಕಕ್ಕೆ ಎಂದೂ ಸರಿಪಡಿಸಲಾಗದ ಹಾನಿ ಉಂಟುಮಾಡಬಹುದು ಎಂದು ಖಮೇನಿ ಎಚ್ಚರಿಸಿದ್ದಾರೆ. ಡೊನಾಲ್ಡ್​ ಟ್ರಂಪ್ ಇರಾನ್​ಗೆ ಬೇಷರತ್ತಾದ ಶರಣಾಗತಿಗೆ ಒತ್ತಾಯಿಸಿದ್ದರು. ಇರಾನ್ ವಾಯುಪ್ರದೇಶದ ಮೇಲೆ ಅಮೆರಿಕ ಈಗ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್ ಉತ್ತಮ ಶಸ್ತ್ರಾಸ್ತ್ರಗಳು ಮತ್ತು ಸ್ಕೈಟ್ರ್ಯಾಕರ್‌ಗಳನ್ನು ಹೊಂದಿರಬಹುದು, ಆದರೆ ಅಮೆರಿಕಕ್ಕಿಂತ ಉತ್ತಮವಾಗಿಲ್ಲ ಎಂದು ಅವರು ಹೇಳಿದ್ದಾರೆ. ಇಸ್ರೇಲ್-ಇರಾನ್ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಂದಿದ್ದು, ಇದು ಇರಾನ್‌ನಲ್ಲಿ ಮಾತ್ರವಲ್ಲದೆ ಜಾಗತಿಕ ನಾಯಕರಲ್ಲಿಯೂ ಭೀತಿಯನ್ನು ಸೃಷ್ಟಿಸಿದೆ.

ಟ್ರಂಪ್ ಇರಾನ್​​ಗೆ ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಟೆಹ್ರಾನ್ ಜನರು ತಕ್ಷಣ ನಗರವನ್ನು ಖಾಲಿ ಮಾಡಬೇಕು ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ನಾನು ಹೇಳಿದ್ದ ಒಪ್ಪಂದಕ್ಕೆ ಇರಾನ್ ಸಹಿ ಹಾಕಲಿಲ್ಲ, ಈಗ ಪರಿಣಾಮವನ್ನು ಎದುರಿಸಲಿ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ನಾವು ಬಿಡುವುದಿಲ್ಲ ಎಂದು ಹೇಳಿದ್ದರು.

ಅಮೆರಿಕ ಮತ್ತು ಕೆಲವೇ ಬೆರಳೆಣಿಕೆಯ ದೇಶಗಳ ಬಳಿಮಾತ್ರ ಭೂಗರ್ಭವನ್ನು ಸೀಳಿಕೊಂಡು ಹೋಗುವ ಕ್ಷಿಪಣಿಗಳಿವೆ. ಹೀಗಾಗಿ ಈ ಯುದ್ಧದಲ್ಲಿ ಅಮೆರಿಕದ ಪಾತ್ರ ನಿರ್ಣಾಯಕವೆನಿಸಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top