ಸ್ಥಳೀಯ ಜನರಲ್ಲಿ ಆತಂಕ
ಉಪ್ಪಿನಂಗಡಿ: ನೆಕ್ಕಿಲಾಡಿ ಸಮೀಪ ಕುಮಾರಧಾರಾ ನದಿ ದಡದಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಂಡು ಬಂದು ಈ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ. ನಿನ್ನೆ ಸಂಜೆ ಮೊಸಳೆ ಕಾಣಿಸಿಕೊಂಡಿದ್ದು, ಇದನ್ನು ಸಮೀಪದಿಂದ ನೋಡಲು ಹೋದವರನ್ನು ಮೊಸಳೆ ಬಾಯಿ ಅಗಲಿಸಿ ಆಕ್ರಮಣಕಾರಿಯಾಗಿ ವರ್ತಿಸಿ ಹೆದರಿಸಿದೆ.
೩೪ ನೆಕ್ಕಿಲಾಡಿಯ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯಲ್ಲಿ ನದಿ ದಡದಲ್ಲಿ ಮೊಸಳೆ ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು ಮಕ್ಕಳು ಸ್ಥಳೀಯ ನಿವಾಸಿಗಳಾದ ಅಝೀಝ್ ಪಿ.ಟಿ. ಹಾಗೂ ಇತರರಲ್ಲಿ ತಿಳಿಸಿದ್ದು, ಅವರು ಅದೇನೆಂದು ನೋಡಲು ಹೋದಾಗ ಮೊಸಳೆಯ ನದಿ ದಡದಲ್ಲಿ ವಿಶ್ರಾಂತಿ ಪಡೆಯುವುದು ಕಂಡು ಬಂತು.
ಅವರು ಸ್ವಲ್ಪ ಹತ್ತಿರಕ್ಕೆ ಹೋದಾಗ ಮೊಸಳೆ ಆಕ್ರಮಣಕಾರಿಯಂತೆ ಇವರ ಕಡೆ ನೋಡಿ ನದಿ ನೀರಿಗೆ ಇಳಿದು ನಾಪ್ತೆಯಾಗಿದೆ. ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿಯೂ ದೊಡ್ಡ ಮೊಸಳೆಗಳೆರಡು ಪ್ರತ್ಯಕ್ಷವಾಗಿದ್ದವು. ಕಳೆದ ವರ್ಷ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂ ಬಳಿಯೂ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ನದಿಯಲ್ಲಿ ಮೊಸಳೆಯಿರುವುದು ನದಿಗೆ ಮೀನು ಹಿಡಿಯಲು ಹೋಗುವವರಲ್ಲಿ ಆತಂಕ ಸೃಷ್ಟಿಸಿದೆ.
























