ಪುತ್ತೂರು: ರಾಜಸ್ವ ಸಂಗ್ರಹದಲ್ಲಿ ರಾಜ್ಯಕ್ಕೆ ಬೆಂಗಳೂರು ಬಿಟ್ಟರೆ ಮಂಗಳೂರು ಎರಡನೇ ಸ್ಥಾನದಲ್ಲಿದೆ. ಬಂಡವಾಳ ಹಾಕಿದಷ್ಟೂ ಹೆಚ್ಚು ಆದಾಯ ತರುವ ಜಿಲ್ಲೆ ಇದು. ಕಾನೂನು ಸುವ್ಯವಸ್ಥೆ, ಸಹೋದರತ್ವ ಕಾಪಾಡಿಕೊಂಡರೆ ಮಂಗಳೂರು ಬೆಳೆಯುವ ಮಟ್ಟವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.

ಬುಧವಾರ ಪುತ್ತೂರಿನ ದರ್ಬೆ ಸಮೀಪ ವಾಣಿಜ್ಯ ತೆರಿಗೆಗಳ ಇಲಾಖೆಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-265, ಲೆಕ್ಕಪರಿಶೋಧನೆ ಕಚೇರಿ ಹಾಗೂ ಜಾರಿ ವಿಭಾಗದ ಕಛೇರಿಗಳ ‘ವಾಣಿಜ್ಯ ತೆರಿಗೆ ಭವನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಟ್ಟಡಗಳು ಸುಸ್ಥಿತಿಯಲ್ಲಿದ್ದಾಗ ಕೆಲಸ ಮಾಡಲೂ ಅನುಕೂಲದ ವಾತಾವರಣ ನಿರ್ಮಾಣವಾಗುವುದರಿಂದ ಸರಕಾರ ಉತ್ತಮ ಕಟ್ಟಡಗಳನ್ನು ಒದಗಿಸಲು ಗಮನಹರಿಸುತ್ತಿದೆ ಎಂದರು.
ಮಂಗಳೂರು ವಿಭಾಗದಲ್ಲಿ ಸರಕು ವಲಯದ 25 ಸಾವಿರ, ಸೇವಾ ವಲಯದಲ್ಲಿ 12 ಸಾವಿರ ಸೇರಿದಂತೆ ಒಟ್ಟು 47 ಸಾವಿರ ತೆರಿಗೆ ಪಾವತಿದಾರರಿದ್ದಾರೆ. ಇಲ್ಲಿ 3100 ಕೋಟಿಗೂ ಮಿಕ್ಕಿ ತೆರಿಗೆ ಪಾವತಿಯಾಗುತ್ತದೆ. ಪ್ರಾಮಾಣಿಕ ತೆರಿಗೆ ಪಾವತಿದಾರರು ಇಲ್ಲಿನವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುತ್ತೂರಿನ ಶಾಸಕರು ಅಭಿವೃದ್ಧಿ ಪರವಾಗಿದ್ದಾರೆ. ಉತ್ಸಾಹಿ, ಮುಂಚೂಣಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಒಳ್ಳೆಯ ಕೆಲಸ ಮಾಡಿದಾಗ ಜನರಿಗೂ ಖುಷಿಯಾಗುತ್ತದೆ. ಪುತ್ತೂರಿನ ಶಾಸಕರು ಪ್ರಥಮ ಬಾರಿಗೆ ಆಯ್ಕೆಯಾದರೂ ಕೆಲಸ ಮಾಡಿಸಿಕೊಳ್ಳಲು ಅವರಿಗೆ ಗೊತ್ತಿದೆ. ಈ ಕಾಋಣದಿಂದಲೇ ಕಷ್ಟವೆನಿಸಿದ್ದ ಮೆಡಿಕಲ್ ಕಾಲೇಜನ್ನು ಬಜೆಟ್‌ನಲ್ಲಿ ಬರುವಂತೆ ಮಾಡಿದ್ದಾರೆ ಎಂದು ಅಶೋಕ್ ರೈ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಾಣಿಜ್ಯ ಇಲಾಖೆ ಸರಕಾರಕ್ಕೆ ಹಣ ತರುವ ಇಲಾಖೆಯಾಗಿರುವುದರಿಂದ ಮಹತ್ವದ್ದಾಗಿದೆ. ತೆರಿಗೆ ಪಾವತಿ ವಿಚಾರದಲ್ಲಿ ಕರ್ನಾಟಕ ದೇಶಕ್ಕೇ ಮಾದರಿಯಾಗಿದ್ದು, 2 ನೇ ಸ್ಥಾನ ಪಡೆದಿದೆ. ಆದರೆ ದೇಶದಲ್ಲೇ ಅತೀ ಹೆಚ್ಚು ಅನ್ಯಾಯ ಕರ್ನಾಟಕಕ್ಕೆ ಆಗುತ್ತಿದೆ. ೧೫ ನೇ ಹಣಕಾಸು, ಇತರ ಗ್ರ್ಯಾಂಟ್‌ಗಳು ರಾಜ್ಯಕ್ಕೆ ಸಿಗುತ್ತಿಲ್ಲ. ಹತ್ತಾರು ಸಾವಿರ ಕೋಟಿ ಪ್ರತಿ ವರ್ಷ ವಂಚನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮೊನ್ನೆಯೂ ಕೇಂದ್ರದ ಬಳಿ ತೆರಳಿ ಪ್ರಯತ್ನ ನಡೆಸಿದ್ದಾರೆ ಎಂದು ಗುಂಡೂರಾವ್ ಹೇಳಿದರು.
ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಾಂಗ್ರೆಸ್ ಎಂದಿಗೂ ಡಬಲ್ ಗೇಮ್ ಮಾಡುವುದಿಲ್ಲ. ಸ್ವತ: ಮುಖ್ಯಮಂತ್ರಿಗಳೇ ಎಲ್ಲರಿಗೂ ಒಂದೇ ರೀತಿಯ ಅನುದಾನ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ತೆರಿಗೆ ಸಂಗ್ರಹ ಮಾಡುವುದ ಮಾತ್ರವಲ್ಲ, ಕಚೇರಿಗಳೂ ಚೆನ್ನಾಗಿರಬೇಕು ಎಂದು ಪುತ್ತೂರಿಗೆ ತುರ್ತು ಅನುದಾನ ಬಿಡುಗಡೆ ಮಾಡಿ ಒಂದೇ ವರ್ಷದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.
ನಾವು ಭಾಷಣದಲ್ಲಿ ಹೇಳಿದ್ದನ್ನು ಉಳಿಸಿಕೊಂಡಿದ್ದೇವೆ. ಮೆಡಿಕಲ್ ಕಾಲೇಜಿಗಾಗಿ ದಿನೇಶ್ ಗುಂಡೂರಾವ್, ಯು.ಟಿ. ಖಾದರ್ ಅವರ ಜತೆ ನಿರಂತರವಾಗಿ ಮುಖ್ಯಮಂತ್ರಿಗಳ ಬಳಿಗೆ ತೆರಳಿದ್ದೇನೆ. 3 ವರ್ಷದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನಡೆಯಲಿದೆ ಎಂದರು. ಪುತ್ತೂರಿನ ಆರೋಗ್ಯ ಇಲಾಖೆಗೆ 4 ಕೋಟಿ, 6 ಪಿ.ಎಚ್.ಸಿ. ಸೇರಿದಂತೆ 40 ಕೋಟಿಯಷ್ಟು ಅನುದಾನ ಪುತ್ತೂರಿಗೆ ಆರೋಗ್ಯ ಸಚಿವರು ನೀಡಿದ್ದಾರೆ ಎಂದು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶುಭ ಹಾರೈಸಿ, ಜಿಲ್ಲೆ ಆರ್ಥಿಕವಾಗಿ ಬಲಾಡ್ಯ ಆಗಬೇಕು. ಸರಕಾರದಿಂದ ಈ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕು ಎಂದು ವಿನಂತಿಸಿದರು.
ಗೌರವಾರ್ಪಣೆ :
ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿದ ದ.ಕ. ನಿರ್ಮಿತಿ ಕೇಂದ್ರದ ಹರೀಶ್ ಮೆದು, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಆಶಿಕುದ್ದೀನ್ ಅಖ್ತರ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ(ಮನವಿಗಳು) ಸುಲಕ್ಷಣ ಎಸ್. ಎನ್., ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ(ಜಾರಿ) ಲಕ್ಷಾಪತಿ ನಾರಾಯಣ ನಾಯ್ಕ್, ಹಿರಿಯ ಉಪ ಆಯುಕ್ತ ಬಾಲಚಂದ್ರ, ಉಪ ಆಯುಕ್ತ ಬೆಳ್ಳಿಯಪ್ಪ, ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು.
ದತ್ತಾಂಶ ನಮೂದು ಸಹಾಯಕಿ ಚಂಚಲ ಪ್ರಾರ್ಥನೆ ಹಾಡಿದರು. ಮಂಗಳೂರು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ವಿ. ಕುಮಾರ್ ಸ್ವಾಗತಿಸಿ, ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್ ವಂದಿಸಿದರು. ಉಪ ಆಯಕ್ತೆ ಹೇಮಲತಾ ಎನ್. ಕಾರ್ಯಕ್ರಮ ನಿರ್ವಹಿಸಿದರು.
























