ಅಮೆರಿಕ ಎಂಟ್ರಿಗೆ ಕ್ಷಣಗಣನೆ ; ಘನಘೋರ ಸಮರ ನಡೆಯುವ ಆತಂಕ
ಟೆಹ್ರಾನ್ : ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ ಶುಕ್ರವಾರ ಶುರುವಾಗಿರುವ ಯುದ್ಧ ಮತ್ತಷ್ಟು ತೀವ್ರಗೊಂಡಿದ್ದು, ಇಸ್ರೇಲ್ ಮೇಲೆ ಹೈಪರ್‌ಸಾನಿಕ್ ಫತಾಹ್-1 ಕ್ಷಿಪಣಿ ಪ್ರಯೋಗಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇಸ್ರೇಲ್‌ನಲ್ಲಿ ಬುಧವಾರ ಮುಂಜಾನೆ ಭೀಕರ ಸ್ಫೋಟ ಸಂಭವಿಸಿದ್ದು, ಇದು ಹೈಪರ್‌ಸಾನಿಕ್ ಕ್ಷಿಪಣಿಯದ್ದೇ ಆಗಿರಬೇಕು ಎನ್ನಲಾಗಿದೆ. ಈ ನಡುವೆ ಇಸ್ರೇಲ್ ಕೂಡ ಇರಾನ್ ಮೇಲೆ ನಿರಂತರ ಕ್ಷಿಪಣಿ ಮಳೆಗರೆಯುತ್ತಿದೆ.
ಹೈಪರ್‌ಸಾನಿಕ್ ಕ್ಷಿಪಣಿ ಅತ್ಯಂತ ಆಧುನಿಕ ಯುದ್ಧಾಸ್ತ್ರವಾಗಿದ್ದು, ಇದು ರಾಡಾರ್ ಕಣ್ಣಿಗೆ ಬೀಳುವುದಿಲ್ಲ ಹಾಗೂ ಯಾವುದೇ ರಕ್ಷಣಾ ಕೋಟೆಯನ್ನು ಭೇದಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇರಾನ್ ಇದೇ ಮೊದಲ ಬಾರಿ ಈ ಕ್ಷಿಪಣಿಯನ್ನು ಪ್ರಯೋಗಿಸಿದ್ದು, ಇದರಿಂದಾಗಿ ಇನ್ನುಮುಂದೆ ಘನಘೋರ ಸಮರ ನಡೆಯುವ ಭೀತಿ ಉಂಟಾಗಿದೆ.
ಇದೇ ವೇಳೆ ಯುದ್ಧದಲ್ಲಿ ಅಮೆರಿಕ ನೇರವಾಗಿ ಶಾಮೀಲಾಗಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಅಮೆರಿಕ ನೇರವಾಗಿ ರಣರಂಗಕ್ಕೆ ಧುಮುಕುವ ಸಾಧ್ಯತೆಗಳನ್ನು ತಿಳಿಸುತ್ತಿವೆ. ಇರಾನ್‌ನಲ್ಲಿ ಅಣ್ವಸ್ತ್ರ ಸ್ಥಾವರಗಳನ್ನು ನಾಶ ಮಡುವುದು ಅಮೆರಿಕದ ಗುರಿ ಎನ್ನಲಾಗಿದೆ.
ಇರಾನ್‌ನ ಪರಮೋಚ್ಚ ನಾಯಕ ಎನ್ನಲಾಗುತ್ತಿರುವ ಅಯಾತುಲ್ಲ ಅಲಿ ಖಮೇನಿ ಎಲ್ಲಿ ಅಡಗಿದ್ದಾರೆಂದು ನಮಗೆ ಗೊತ್ತಿದೆ. ಆದರೆ ಅದನ್ನು ನಾವು ಈಗ ಬಹಿರಂಗಪಡಿಸುವುದಿಲ್ಲ. ಖಮೇನಿಯನ್ನು ಸಾಯಿಸುವುದು ಸದ್ಯದ ನಮ್ಮ ಗುರಿಯಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಹೈಪರ್‌ಸಾನಿಕ್ ಕ್ಷಿಪಣಿಯನ್ನು ಇಸ್ರೇಲ್ ಮೇಲೆ ಪ್ರಯೋಗಿಸಲೆಂದೇ ಇರಾನ್ ಸಂಗ್ರಹಿಸಿಟ್ಟುಕೊಂಡಿದೆ. ಅದಕ್ಕೆ ಇಸ್ರಾಯಿಲ್ ನಾಶಕ ಎಂದೇ ಇರಾನ್ ಹೆಸರಿಟ್ಟಿದೆ. 2023ರಲ್ಲಿ ಇರಾನ್ ಈ ಕ್ಷಿಪಣಿಯನ್ನು ಬಹಿರಂಗಪಡಿಸಿತ್ತು. ಆ ಸಂದರ್ಭದಲ್ಲಿ ಟೆಲ್ ಅವೀವ್‌ಗೆ (ಇಸ್ರೇಲ್ ರಾಜಧಾನಿ) 400 ಸೆಕೆಂಡ್ ಎಂಬ ಬ್ಯಾನರನ್ನು ಈ ಕ್ಷಿಪಣಿಗೆ ಕಟ್ಟಿ ಇರಾನ್ ಅದರ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸಿತ್ತು.
ಇದರ ಬೆನ್ನಲ್ಲೇ ಅಮೆರಿಕದಿಂದ ಫೈಟರ್ ಜೆಟ್ ವಿಮಾನಗಳು ಮಧ್ಯ ಪೂರ್ವದತ್ತ ಬಂದಿದ್ದು, ಇದು ಅಮೆರಿಕ ಯುದ್ಧ ರಂಗಕ್ಕೆ ಧುಮುಕುವ ಸೂಚನೆ ಎನ್ನಲಾಗಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆ ಟ್ರಂಪ್ ಸುಮಾರು ಒಂದೂವರೆ ತಾಸು ಸುದೀರ್ಘ ಸಮಾಲೋಚನೆ ನಡೆಸಿದ್ದು, ಇಲ್ಲಿ ಯುದ್ಧದ ಬಗ್ಗೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಅಣ್ವಸ್ತ್ರ ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿ ಶರಣಾಗಿ ಎಂಬ ಟ್ರಂಪ್ ಸಲಹೆಯನ್ನು ಖಮೇನಿ ತಿರಸ್ಕರಿಸಿದ್ದು, ಯುದ್ಧ ಶುರುವಾಗಿದೆ, ನಾವು ಯೆಹೂದಿ ಭಯೋತ್ಪಾದನೆಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.