ತನಿಖೆ ನಡೆಸಿ ಎರಡು ವಾರದಲ್ಲಿ ವರದಿ ನೀಡಲು ಡಿಜಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆದೇಶ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೆ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಪಾಲಿಸುವ ನೆಪದಲ್ಲಿ ಪುತ್ತೂರು ಸೇರಿದಂತೆ ವಿವಿಧೆಡೆ ಹಿಂದೂ ಮುಖಂಡರ, ಕಾರ್ಯಕರ್ತರ ಮನೆಗಳಿಗೆ ರಾತ್ರೋರಾತ್ರಿ ತೆರಳಿ ವಿಚಾರಣೆ ನಡೆಸಿದ್ದ ಕುರಿತು ಸಮಗ್ರ ತನಿಖೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ತನಿಖಾ ವಿಭಾಗದ ಡಿಜಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆದೇಶ ಮಾಡಿದೆ.
ಹಿಂದೂ ಕಾರ್ಯರ್ತರ ಮನೆಗಳಿಗೆ ಪೊಲೀಸರು ಭೇಟಿ ನೀಡುತ್ತಿದ್ದ ವಿಚಾರವಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ತನಿಖಾ ವಿಭಾಗದ ಡಿಜಿಗೆ ಸೂಚನೆ ನೀಡಿದೆ. ಸ್ಥಳ ಪರಿಶೀಲನೆ, ಪೊಲೀಸರ ದಾಖಲೆ ಪರಿಶೀಲನೆ ಮತ್ತು ಎಲ್ಲ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಸಾರ್ವಜನಿಕರು, ಸಮಾಜ ಸೇವಕರು ಮತ್ತು ಒಂದು ಸಮುದಾಯದ ಸಂಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಮನೆಗಳಿಗೆ ಪೊಲೀಸರು ಯಾವುದೇ ಅಪರಾಧದ ಹಿನ್ನೆಲೆ, ಎಫ್ಐಆರ್, ವಾರಂಟ್ ಅಥವಾ ಕಾನೂನು ದಾಖಲೆ ನೀಡದೆ ಕಾನೂನುಬಾಹಿರವಾಗಿ ರಾತ್ರಿ 11 ಗಂಟೆ ನಂತರ ಭೇಟಿ ನೀಡುತ್ತಿದ್ದಾರೆ. ಇದರಿಂದ ಕಾನೂನುಬದ್ಧ ವ್ಯಕ್ತಿಗಳಿಗೆ ತೊಂದರೆಯಾಗುತ್ತಿದೆ. ಪೊಲೀಸರು ಮನೆಗಳಿಗೆ ಹೋಗಿ ಛಾಯಾಚಿತ್ರ ತೆಗೆದು, ಜಿಪಿಎಸ್ ಸ್ಥಳ ಮಾಹಿತಿ ಸಂಗ್ರಹಿಸಿ, ಪ್ರಶ್ನೆ ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವಿರುದ್ಧ ಶಾಸಕ ಭರತ್ ಶೆಟ್ಟಿ ದೂರು ನೀಡಿದ್ದರು.
ತನಿಖೆಗೆ ಆದೇಶಿಸಿದ ಬೆನ್ನಲ್ಲೇ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ತನಿಖಾ ವಿಭಾಗದ ಅಧಿಕಾರಿಗಳು ದೂರು ನೀಡಿರುವ ಡಾ.ವೈ.ಭರತ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ದೂರಿನ ಬಗ್ಗೆ ಸಂಪೂರ್ಣ ವಿವರಣೆ ಪಡೆದುಕೊಂಡರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರುವ ನೆಪದಲ್ಲಿ ಪೊಲೀಸರು ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಮುಖಂಡರ ಮನೆಗಳಿಗೆ ತಡರಾತ್ರಿ ಭೇಟಿ ನೀಡುತ್ತಿದ್ದರು. ಇದಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.