ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಅಯ್ಯಪ್ಪ ಗುಡಿ, ನವಗ್ರಹ ಗುಡಿ, ನಾಗನ ಸಾನಿಧ್ಯವನ್ನು ಸ್ಥಳಾಂತರಗೊಳಿಸುವ ಬಗ್ಗೆ ದೈವಜ್ಞರ ಮೂಲಕ ಪ್ರಶ್ನಾಚಿಂತನೆ ಇರಿಸಿ ಆ ಪ್ರಕಾರ ತೀರ್ಮಾನ ಕೈಗೊಳ್ಳಲು ಶನಿವಾರ ಸಂಜೆ ನಡೆದ ದೇವಸ್ಥಾನದ ಕುರಿತ ಅಭಿವೃದ್ಧಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಯ್ಯಪ್ಪ ಗುಡಿ ಇರುವ ಸ್ಥಳದಲ್ಲಿ ರಥ ನಿಲುಗಡೆ ಆಗಬೇಕು ಅನ್ನುವ ಅಂಶ ಕಂಡು ಬಂದಿದೆ. ಜತೆಗೆ ಅಲ್ಲಿರುವ ನಾಗನ ಸಾನಿಧ್ಯವನ್ನು ದೇವಾಲಯದ ಗದ್ದೆಯಲ್ಲಿರುವ ಮೂಲ ನಾಗನ ಸಾನಿಧ್ಯಕ್ಕೆ ಸ್ಥಳಾಂತರಿಸುವಿಕೆಯ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಅದರಂತೆ ತೀರ್ಮಾನಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೇವಾಲಯದ ಬ್ರಹ್ಮಕಲಶಕ್ಕೆ ಸಮಯ ಬಂದಿದ್ದು ಅದಕ್ಕಿಂತ ಮೊದಲು ಮಾಸ್ಟರ್ ಪ್ಲಾನ್ ಕಾರ್ಯಗತ ಆಗಬೇಕು. ಎರಡು ವರ್ಷದೊಳಗೆ ಬ್ರಹ್ಮಕಲಶಕ್ಕೆ ಅಣಿಯಾಗಲು ಜೀರ್ಣೋದ್ಧಾರಕ್ಕೆ ಪೂರಕವಾಗಿ 20 ಜನರ ಸಮಿತಿ ಮಾಡಿದ್ದು, ಅದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇದೆ. ಆ ಪಟ್ಟಿಯನ್ನು ಅಂತಿಮಗೊಳಿಸಿ ಸಮಿತಿ ಸದಸ್ಯರ ಮನೆಗೆ ಪಟ್ಟಿ ರವಾನೆ ಆಗಬೇಕು. ಇದು ದೇವಾಲಯದ ವ್ಯವಸ್ಥಾಪನ ಸಮಿತಿ ತಕ್ಷಣ ಮಾಡಬೇಕಾದ ಕೆಲಸ. ಜುಲೈ 6 ರಂದು ಜೀರ್ಣೋದ್ಧಾರ ಸಮಿತಿ ಸಭೆಯನ್ನು ಕರೆಯಬೇಕು. ಜೀರ್ಣೋದ್ಧಾರ ಕಾರ್ಯಕ್ಕಾಗಿ 20 ಕೋ.ರೂ.ಹಣ ಸಂಗ್ರಹಿಸುವ ಅಗತ್ಯ ಇದೆ ಎಂದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ಎಂಜಿನಿಯರ್ ಗಳು ದೇವಾಲಯಕ್ಕೆ ಬಂದಿದ್ದು ಮಾಸ್ಟರ್ ಪ್ಲಾನ್ ಅವರ ಬಳಿ ಇದೆ. ಮುಂದಿನ 15 ದಿವಸದೊಳಗೆ ತರಿಸಿ ಆ ಬಳಿಕ ಅದನ್ನು ಸರಕಾರಕ್ಕೆ ಕಳುಹಿಸಬೇಕು. ಈಗಾಗಲೇ ಪ್ರಕ್ರಿಯೆ ತಡವಾಗಿದ್ದು ವ್ಯವಸ್ಥಾಪನ ಸಮಿತಿ ಇದಕ್ಕೆ ವೇಗ ನೀಡಬೇಕು ಎಂದು ಶಾಸಕ ರೈ ಸೂಚಿಸಿದರು.
ಕೆರೆ ಅಭಿವೃದ್ಧಿಗೆ ಒಟ್ಟು 5.70 ಕೋ.ರೂ. ಅನುದಾನ ಇದ್ದು ಮಾದರಿ ಪುಷ್ಕರಿಣಿ ನಿರ್ಮಾಣ ಮಾಡಬೇಕು. ಕೆರೆ ಆಯನ ಸ್ಥಳ ಬಿಟ್ಟು ಉಳಿದೆಡೆ ಕಾರಂಜಿ ನಿರ್ಮಾಣ ಆಗಬೇಕು. ಕೆರೆ ಸುತ್ತಲಿನ ಇಡೀ ಪರಿಸರ ಸಮತ್ತಟ್ಟು ಮಾಡಿದ್ದು ಅಲ್ಲಿ ಗ್ರಾನೈಟ್ ಹಾಸಬೇಕು. ಹರಿಕಥೆ, ಭಜನೆ ಸಹಿತ ವಿವಿಧ ಚಟುವಟಿಕೆಗಳು ಅಲ್ಲಿ ನಡೆಯಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
16 ಕೋ.ರೂ.ವೆಚ್ಚದಲ್ಲಿ ಡೈನೇಜ್ ನಿರ್ಮಾಣ ಆಗಲಿದ್ದು ಇದಕೋಸ್ಕರ ಮುಖ್ಯ ವೆಟ್ ನಿರ್ಮಾಣವಾಗಲಿದೆ. ಇನ್ನೊಂದೆಡೆ ದೇವಾಲಯದ ಶಿವನ ಮೂರ್ತಿ ಇರುವ ಜಾಗದಲ್ಲಿ ಖಾಸಗಿ ಜಾಗ ಖರೀದಿಸಿ ವೆಟ್‌ವೆಲ್ ನಿರ್ಮಾಣ ಮಾಡಲು ಜಾಗ ಖರೀದಿ, ಆ ಜಾಗ ಸೂಕ್ತವೇ ಎನ್ನುವ ಬಗ್ಗೆ ತೀರ್ಮಾನ ಮಾಡಲು ಸಭೆ ನಿರ್ಧರಿಸಿತ್ತು.
ಮಡಿವಾಳಕಟ್ಟೆ ಸ್ಮಶಾನ ಸಮೀಪ ಖಾಸಗಿ ಜಾಗ ಇದ್ದು ಅದರ ಖರೀದಿಗೆ ಮಾಲಕರ ಜತೆ ಚರ್ಚಿಸುವಂತೆ ಸಭೆಯಲ್ಲಿ ಶಾಸಕರು ಸಲಹೆ ನೀಡಿದರು. ವಸತಿ ಗೃಹಕ್ಕೆ ನಿರ್ಮಾಣಕ್ಕೆ ಸಂಬಂಧಿಸಿ ಜಾಗ ಪಡೆಯಲು ಸೂಚನೆ ನೀಡಲಾಯಿತು.
ಸಭೆಯಲ್ಲಿ ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಿನಯ ಸುವರ್ಣ, ನಳಿನಿ ಶೆಟ್ಟಿ, ಕೃಷ್ಣವೇಣಿ, ಸುಭಾಷ್ ರೈ, ಈಶ್ವರ್ ಬೆಡೆಕರ್, ಅರ್ಚಕ ವಸಂತ ಕುಮಾರ್ ಕೆದಿಲಾಯ, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
























