ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅಬ್ಬರ ಮುಂದುವರಿದಿದ್ದು, ಧಾರಾಕಾರ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ.
ಗುಡ್ಡ ಕುಸಿದಿರುವ ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆಯೇ ರಸ್ತೆಗೆ ಉರುಳಿರುವ ಮಣ್ಣಿನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆ ಕೂಡ ಕುಸಿದು ಬಿದ್ದಿದೆ. ಶನಿವಾರ ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು.

