ಭೀಕರ ವಿಮಾನ ಅವಘಡದಲ್ಲಿ ಏಕೈಕ ಪ್ರಯಾಣಿಕ ಬದುಕಿ ಉಳಿದದ್ದಾದರೂ ಹೇಗೆ?

ಇಲ್ಲಿದೆ ವಿಶ್ವಾಸ್ ಕುಮಾರ್ ರಮೇಶ್‌ಗೆ ಪುನರ್ಜನ್ಮ ಸಿಕ್ಕಿದ ಪೂರ್ಣ ಮಾಹಿತಿ

ಅಹಮದಾಬಾದ್ : ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದಲ್ಲಿ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಬದುಕುಳಿದದ್ದಾರೂ ಹೇಗೆ ಎಂಬ ಪ್ರಶ್ನೆ ಎಲ್ಲರನ್ನು ಈಗ ಕಾಡುತ್ತಿದೆ. ಇಡೀ ವಿಮಾನ ಬೆಂಕಿಯುಂಡೆಯಂತಾಗಿ ಕಟ್ಟಡಕ್ಕೆ ಅಪ್ಪಳಿಸಿದ್ದು, 1.25 ಲಕ್ಷ ಲೀಟರ್‌ ಪೆಟ್ರೋಲ್‌ ಸ್ಫೋಟಗೊಂಡಿದೆ. ವಿಮಾನದಲ್ಲಿ ಇದ್ದವರು ಯಾರೂ ಬದುಕುಳಿಯುವ ಸಾಧ್ಯತೆಯಿಲ್ಲ ಎಂದೇ ಭಾವಿಸಿರುವಾಗ ವಿಶ್ವಾಸ್‌ ಕುಮಾರ್‌ ರಮೇಶ್‌ ಪವಾಡ ಎಂಬಂತೆ ಬದುಕುಳಿದಿದ್ದಾರೆ. ಅದೂ ಹೆಚ್ಚೇನೂ ಗಂಭೀರ ಗಾಯಗಳಿಲ್ಲದೆ.

ಇದು ಅವರಿಗೆ ಸಿಕ್ಕಿದ ಪುನರ್ಜನ್ಮ ಎಂದೇ ಹೇಳಲಾಗುತ್ತಿದೆ. ಇಂದು ತನ್ನ ಯೋಗಕ್ಷೇಮ ವಿಚಾರಿಸಲು ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಳಿಯೂ ವಿಶ್ವಾಸ್‌ ಕುಮಾರ್‌ ತಾನು ಮರಳಿ ಹುಟ್ಟಿ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ವಿಮಾನದಲ್ಲಿದ್ದ 241 ಜನರು ಮೃತಪಟ್ಟಿದ್ದು, ವಿಶ್ವಾಸ್‌ ಕುಮಾರ್‌ ಮಾತ್ರ ಪವಾಡಸದೃಶರಾಗಿ ಪಾರಾಗಿದ್ದಾರೆ. ಬದುಕುಳಿದ ವಿಶ್ವಾಸ್ ಕುಮಾರ್ ರಮೇಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್​ನ ಸಿವಿಲ್ ಆಸ್ಪತ್ರೆಯಲ್ಲಿ ಭೇಟಿಯಾದರು. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದ ಭಯಾನಕ ಸಂದರ್ಭದ ಬಗ್ಗೆ ವಿಶ್ವಾಸ್ ಕುಮಾರ್ ಅವರ ಬಳಿಯಿಂದ ಪ್ರಧಾನಿ ಮೋದಿ ಮಾಹಿತಿ ಸಂಗ್ರಹಿಸಿದರು. ಇದೇ ವೇಳೆ, ‘ಅಪಘಾತದಲ್ಲಿ ಬದುಕುಳಿದಿರುವುದನ್ನು ನಂಬಲಾಗುತ್ತಿಲ್ಲ’ ಎಂದು ವಿಶ್ವಾಸ್ ಕುಮಾರ್ ಹೇಳಿದರು.





















































 
 

ಎಲ್ಲರೂ ಭಾವಿಸಿರುವಂತೆ ವಿಶ್ವಾಸ್‌ ಕುಮಾರ್‌ ಕಟ್ಟಡಕ್ಕೆ ಅಪ್ಪಳಿಸಿದ ವಿಮಾನದಿಂದ ಹೊರಗೆ ಜಿಗಿದು ಪಾರಾಗಿಲ್ಲ. ಹೀಗೆ ಮಾಡುತ್ತಿದ್ದರೆ ಅವರಿಗೆ ಗಂಭೀರವಾದ ಗಾಯವಾಗಿರಬೇಕಿತ್ತು. ವಿಶ್ವಾಸ್‌ ಕುಮಾರ್‌ 11ಎ ಸೀಟಿನಲ್ಲಿ ಕುಳಿತಿದ್ದರು. ಈ ಸೀಟ್‌ ವಿಮಾನದ ಎಡಭಾಗದ ಎಮರ್ಜೆನ್ಸಿ ಬಾಗಿಲಿನ ಪಕ್ಕದಲ್ಲಿತ್ತು. ವಿಮಾನ ಕಟ್ಟಡಕ್ಕೆ ಅಪ್ಪಳಿಸುತ್ತಿದ್ದಂತೆ ಇಬ್ಭಾಗವಾಗಿದೆ. ಆಗ ವಿಶ್ವಾಸ್‌ ಕುಮಾರ್‌ ಸೀಟ್‌ ವಿಮಾನದಿಂದ ಕಳಚಿಕೊಂಡಿದೆ. ಸೀಟ್‌ಬೆಲ್ಟ್‌ ಸಮೇತ ವಿಶ್ವಾಸ್‌ ಕುಮಾರ್‌ ಕುಳಿತಿದ್ದ ಸೀಟ್‌ ವಿಮಾನದಿಂದ ಹೊರಗೆ ಚಿಮ್ಮಿದೆ. ಹೀಗಾಗಿ ಬೆಂಕಿಯ ಕೆನ್ನಾಲಿಗೆಗೆ ಸಿಗದೆ ಪಾರಾಗಲು ಸಾಧ್ಯವಾಗಿದೆ. ಸೀಟಿನಲ್ಲಿ ಕುಳಿತ ಸ್ಥಿತಿಯಲ್ಲೇ ಇದ್ದ ಕಾರಣ ವಿಶ್ವಾಸ್‌ ಕುಮಾರ್‌ ನೆಲಕ್ಕಪ್ಪಳಿಸಿದರೂ ಅವರಿಗೆ ಹೆಚ್ಚು ಏಟು ಬಿದ್ದಿಲ್ಲ. ಸೀಟ್‌ ರಕ್ಷಣಾ ಕವಚದಂತೆ ಅವರನ್ನು ಕಾಪಾಡಿದೆ.

ವಿಶ್ವಾಸ್‌ ಕುಮಾರ್‌ ಬಿದ್ದ ಜಾಗ ಕೆಳಭಾಗದಲ್ಲಿತ್ತು. ಬೆಂಕಿಯ ಕೆನ್ನಾಲಿಗೆ ಅಲ್ಲಿಗೆ ತಲುಪಿರಲಿಲ್ಲ. ಬಳಿಕ ಅವರು ಸೀಟ್‌ ಬೆಲ್ಟ್‌ ಕಳಚಿಕೊಂಡು ಅಲ್ಲಿಂದ ನಡೆದು ದೂರ ಬಂದಿದ್ದಾರೆ. ಆದರೆ ಸುತ್ತಮುತ್ತ ವಿಮಾನದ ಅವಶೇಷ, ಮೃತದೇಹಗಳು ಬಿದ್ದಿದ್ದವು. ಇದನ್ನು ನೋಡಿ ಆಘಾತವಾಯಿತು ಎಂದು ವಿಶ್ವಾಸ್‌ ಕುಮಾರ್‌ ಹೇಳಿಕೊಂಡಿದ್ದಾರೆ.

ಅಪಘಾತದ ಸಂದರ್ಭದಲ್ಲಿ ಕೆಲವು ಕ್ಷಣಗಳ ಕಾಲ, ‘ನಾನು ಇನ್ನೇನು ಸಾಯುತ್ತೇನೆ’ ಎಂದು ಅನಿಸಿತು. ಆದರೆ ಕಣ್ಣು ತೆರೆದಾಗ, ಜೀವಂತವಾಗಿದ್ದೇನೆ ಎಂಬುದು ಅರಿವಾಯಿತು. ತಕ್ಷಣವೇ ಸೀಟ್ ಬೆಲ್ಟ್ ತೆರೆದು ಹೊರಬರಲು ಪ್ರಯತ್ನಿಸಿದೆ. ನಂತರ ಹೊರಬಂದೆ. ನನ್ನ ಕಣ್ಣೆದುರೇ ವಿಮಾನದಲ್ಲಿದ್ದ ಏರ್ ಹೋಸ್ಟೆಸ್​​​ಗಗಳು, ಚಿಕ್ಕಮ್ಮ ಮತ್ತು ಚಿಕ್ಕಪ್ಪ ಎಲ್ಲರೂ ಕಣ್ಮರೆಯಾದರು. ನನ್ನೊಂದಿಗೆ ಇದ್ದ ಯಾರೂ ಉಳಿದಿರಲಿಲ್ಲ ಎಂದು ವಿಶ್ವಾಸ್ ಕುಮಾರ್ ಅಪಘಾತದ ಸಂದರ್ಭದ ಭೀಕರತೆಯನ್ನು ಬಿಚ್ಚಿಟ್ಟರು.

ಜನರು ಜೀವಂತ ಉರಿಯುತ್ತಿರುವುದನ್ನು ನಾನು ನೋಡಿದೆ. ಬೆಂಕಿಯಿಂದಾಗಿ ಎಡಗೈ ಸುಟ್ಟುಹೋಗಿತ್ತು. ಅಲ್ಲಿಂದ ಹೊರ ಜಿಗಿದು ಓಡಿ ಹೊರಬಂದೆ. ಎಲ್ಲೆಡೆ ಜನರು ಬಿದ್ದಿದ್ದರು. ನನ್ನನ್ನು ಆಂಬ್ಯುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಕರೆತಂದರು ಎಂದು ವಿಶ್ವಾಸ್ ಕುಮಾರ್ ತಿಳಿಸಿದರು. ಈ ಅಪಘಾತವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಹೇಗೆ ಬದುಕುಳಿದೆ ಎಂಬುದು ಈಗಲೂ ನನಗೆ ಸರಿಯಾಗಿ ತಿಳಿದಿಲ್ಲ. ಜನರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿನ ಜನರು ತುಂಬಾ ಒಳ್ಳೆಯವರು ಎಂದು ಅವರು ಹೇಳಿದರು.
ವಿಶ್ವಾಸ್ ಕುಮಾರ್ ರಮೇಶ್ 40 ವರ್ಷದ ಬ್ರಿಟಿಷ್ ಪ್ರಜೆಯಾಗಿದ್ದು, ಅವರ ಕುಟುಂಬವನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಅವರು ಸಹೋದರ ಅಜಯ್ ಕುಮಾರ್ ರಮೇಶ್ (45) ಅವರೊಂದಿಗೆ ಬ್ರಿಟನ್​​ಗೆ ಹಿಂತಿರುಗುತ್ತಿದ್ದರು. ವಿಶ್ವಾಸ್ ವಿಮಾನದಲ್ಲಿ 11A ನಲ್ಲಿ ಕುಳಿತಿದ್ದರೆ, ಅವರ ಸಹೋದರ ಮತ್ತೊಂದು ಸಾಲಿನಲ್ಲಿ ಕುಳಿತಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top