ಮೈತೆಯಿ ಸಂಘಟನೆಯ ನಾಯಕನ ಬಂಧನ ವಿರೋಧಿಸಿ ಪ್ರತಿಭಟನೆ
ಇಂಫಾಲ: ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ರಾತ್ರೋರಾತ್ರಿ ಎಲ್ಲ ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಲಾಗಿದ್ದು, ಹಲವೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ. ಭದ್ರತಾ ಪಡೆಗಳು ಮಣಿಪುರದ ಇಂಫಾಲ್ ಪಶ್ಚಿಮದ ಕ್ವಾಕೆಟಾಲ್ ಪ್ರದೇಶದಲ್ಲಿ ಮೈತೆಯಿ ಸಂಘಟನೆಯ ನಾಯಕ ಅರಾಂಬೈ ಟೆಂಗೋಲ್ ಅವರನ್ನು ಬಂಧಿಸಿದ್ದು, ಇದು ಅವರ ಬೆಂಬಲಿಗರನ್ನು ಕೆರಳಿಸಿದೆ. ಇದರ ಬೆನ್ನಲ್ಲೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಹಿಂಸಾಚಾರ ಹಿನ್ನೆಲೆಯಲ್ಲಿ ಪೊಲೀಸರು ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್ ಮತ್ತು ಕಕ್ಚಿಂಗ್‌ನಂತಹ ಇತರ ಜಿಲ್ಲೆಗಳಲ್ಲಿಯೂ ಕರ್ಫ್ಯೂ ಜಾರಿ ಮಾಡಲಾಗಿದೆ, ಬಿಷ್ಣುಪುರ ಜಿಲ್ಲೆಯಲ್ಲೂ ಕರ್ಫ್ಯೂ ವಿಧಿಸಲಾಗಿದೆ.
ಪ್ರತಿಭಟನಾಕಾರರು ಮೈತೆಯಿ ಸ್ವಯಂಸೇವಕ ಗುಂಪು ಅರಾಂಬೈ ಟೆಂಗೋಲ್‌ಗೆ ಸೇರಿದವರಾಗಿದ್ದರು. ಇವರು ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದು, ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಗುಂಪು ಹಿಂದಿನ ಜನಾಂಗೀಯ ಹಿಂಸಾಚಾರದ ಸಮಯದಲ್ಲಿ ಕುಕಿ ಗ್ರಾಮಗಳ ಮೇಲೆ ದಾಳಿ ಮಾಡಿದ ಆರೋಪವನ್ನು ಕೂಡ ಹೊಂದಿದೆ.
ಅರಾಂಬೈ ಟೆಂಗೋಲೆ ನಾಯಕನ ಬಂಧನದ ನಂತರ ಭಾರಿ ಸಂಖ್ಯೆಯಲ್ಲಿ ಜನ ಸೇರಿ ಪ್ರತಿಭಟನೆ ನಡೆಸಿದರು. ಸುಮಾರು 50 ಸುತ್ತು ಗುಂಡಿನ ಚಕಮಕಿ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು. ಗುಂಡಿನ ದಾಳಿ ಮತ್ತು ಪ್ರತಿಭಟನೆಗಳು ಇಂದು ಬೆಳಿಗ್ಗೆಯವರೆಗೂ ಮುಂದುವರಿದಿದೆ. ಅರಾಂಬೈ ಟೆಂಗೋಲ್ ಸದ್ಯ 10 ದಿನಗಳ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದಾರೆ.
ಇಂಫಾಲ ಪಶ್ಚಿಮ, ಇಂಫಾಲ ಪೂರ್ವ, ತೌಬಲ್ , ಬಿಷ್ಣುಪುರ ಮತ್ತು ಕಕ್ಚಿಂಗ್ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಿಕೊಂಡು, ದ್ವೇಷ ಭಾಷಣ ಮತ್ತು ದ್ವೇಷದ ವಿಡಿಯೊ ಸಂದೇಶಗಳನ್ನು ಪ್ರಸಾರ ಮಾಡಿ ಸಾರ್ವಜನಿಕರನ್ನು ಕೆರಳಿಸುವ ಶಂಕೆ ಇದೆ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾಗಾಗಿ ಇಂಫಾಲ ಪೂರ್ವ, ಇಂಫಾಲ ಪಶ್ಚಿಮ, ತೌಬಲ್, ಕಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಸದ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಯುಕ್ತ ಎನ್. ಅಶೋಕ್ ಕುಮಾರ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಮಣಿಪುರದಲ್ಲಿ ಸುಮಾರು ಎರಡು ವರ್ಷ ನಡೆದ ಹಿಂಸಾಚಾರದಲ್ಲಿ 258 ಜನರು ಪ್ರಾಣ ಕಳೆದುಕೊಂಡಿದ್ದಾರೆ. 5,600ಕ್ಕೂ ಹೆಚ್ಚು ಸರ್ಕಾರಿ ಶಸ್ತ್ರಾಸ್ತ್ರಗಳು ಮತ್ತು 6.5 ಲಕ್ಷ ಸುತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ. 60,000ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಸಾವಿರಾರು ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ಫೆಬ್ರವರಿ 9ರಂದು ರಾಜ್ಯದ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ನಂತರ ವಿಧಾನಸಭೆಯನ್ನು ವಿಸರ್ಜಿಸಿ ಫೆಬ್ರವರಿ 14ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.