ಪುತ್ತೂರು: ಪುತ್ತೂರಿನ ನೆಹರು ನಗರದ ನಿವಾಸಿಯಾಗಿದ್ದ ಕುಞಣ್ಣ ಗೌಡರು ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವರ್ಗಸ್ಥರಾದರು.
ಕಠಿಣ ಪರಿಶ್ರಮಿ
73 ವರ್ಷ ವಯಸ್ಸಿನ ಕುಞಣ್ಣರು ಜೀವನದ ಆರಂಭದ ದಿನಗಳಲ್ಲಿ ವಿಟ್ಲದ ಆಸ್ಪತ್ರೆಯೊಂದರಲ್ಲಿ ಕಾಂಪೌಂಡರ್ ಆಗಿ, ಸಿ.ಪಿ.ಸಿ.ಆರ್.ಐ.ನಲ್ಲಿ ದಿನಗೂಲಿ ನೌಕರರಾಗಿ ದುಡಿದು ಬದುಕು ಕಟ್ಟಿಕೊಂಡಿದ್ದರು. ಬಳಿಕ ವಿವೇಕಾನಂದ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕರಾಗಿ ಸೇವೆಗೆ ಸೇರಿದ್ದರು. ನಿಷ್ಠೆಗೆ ಪರ್ಯಾಯ ಪದವಾಗಿದ್ದ ಕುಞಣ್ಣರು ಬಳಿಕ ಕಚೇರಿ ಗುಮಾಸ್ತರಾಗಿ ಕೊನೆಯಲ್ಲಿ ಕಛೇರಿ ಅಧೀಕ್ಷಕರಾಗಿ ಸೇವಾ ನಿವೃತ್ತಿ ಪಡೆದಿದ್ದರು.
ನಿವೃತ್ತಿ ನಂತರವೂ ಸೇವೆ
ಸೇವಾ ನಿವೃತ್ತಿಯ ಬಳಿಕ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಧಾನ ಕಛೇರಿಯಲ್ಲಿ ಗುಮಾಸ್ತರಾಗಿ 6 ವರ್ಷಗಳ ಕಾಲ ಸಮರ್ಥ ಸೇವೆ ನೀಡಿದ್ದರು.
ವಿದ್ಯಾ ಪೋಷಕ
ವಿವೇಕಾನಂದ ಕಾಲೇಜಿಗೆ ಶಿಕ್ಷಣ ಅರಸಿ ಬರುತ್ತಿದ್ದ ನೂರಾರು ಮಕ್ಕಳಿಗೆ ತನ್ನ ಮನೆಯಲ್ಲಿ ಆಶ್ರಯ ನೀಡುವುದರೊಂದಿಗೆ ಅವರಿಗೆ ಪೋಷಕರಾಗಿಯೂ ಕರ್ತವ್ಯ ನಿಭಾಯಿಸಿದ್ದರು.
ಇತ್ತೀಚೆಗೆ ಗತಿಸಿದ ಅವರ ಪತ್ನಿ ಶ್ರೀಮತಿ ಯೋಗಿನಿಯವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದೂರದ ತಿಪಟೂರು, ಮೈಸೂರು ಮುಂತಾದ ಊರುಗಳ ಪೋಷಕರು ಭಾಗವಹಿಸಿದ್ದೇ ಅದಕ್ಕೆ ಸಾಕ್ಷಿ.
ನಿನ್ನೆಯೂ ಶಿಕ್ಷಣ ಕಾಯಕ
ನಿನ್ನೆ ಸಾಯಂಕಾಲವೂ ವಿದ್ಯಾರ್ಥಿನಿ ಓರ್ವಳಿಗೆ ಪಕ್ಕದ ಉಮೇಶ್ ಮತಾವು ಅವರ ಪಿ.ಜಿ.ಯಲ್ಲಿ ಅವಕಾಶ ಕೋರಿ ಆಕೆಯನ್ನು ಕರೆದು ತಂದು ಮಾತನಾಡಿದ್ದರು ಎಂದು ಉಮೇಶ್ ತಿಳಿಸಿದ್ದಾರೆ.
ಧಾರ್ಮಿಕ ಸೇವೆ
ನೆಹರೂ ನಗರದ ಕಲ್ಲೇಗ ದೈವಸ್ಥಾನದಲ್ಲಿ ಮತ್ತು ಭಜನಾ ಮಂದಿರದಲ್ಲಿ ನಿರಂತರವಾಗಿ ಮೂರು ದಶಕಗಳ ಕಾಲ ವಿವಿಧ ಸೇವೆಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದರು.
ಮೃತರು ಪೂರ್ಲುಪ್ಪಾಡಿಯ ದಿವಂಗತ ಗಿರಿಯಪ್ಪ – ರಾಮಕ್ಕ ದಂಪತಿಗಳ ಪುತ್ರನಾಗಿ ಹಿರಿಯ ಮಗ ವಿಜೇತ್, ಸೊಸೆ ಪುನೀತಾ, ಮೊಮ್ಮಕ್ಕಳಾದ ಸಮನ್ವಿ ಮತ್ತು ಈಶಾನ್ವಿ, ಮಗಳು ವಿದ್ಯಾ, ಅಳಿಯ, ನ್ಯಾಯವಾದಿ, ಕೃಷ್ಣಪ್ಪ ಕಕ್ವೆ, ಮೊಮ್ಮಕ್ಕಳಾದ ಮಿಥಾಲಿ ಮತ್ತು ಪ್ರಾಂಜಲಿ, ಕಿರಿಯ ಮಗ, ನೆಹರೂ ನಗರದಲ್ಲಿ ವಿಕ್ಕೀಸ್ ಬೇಕರಿಯ ಮಾಲಿಕ ವಿಕ್ರಂ ಹಾಗೂ ಅಪಾರ ಬಂಧುಗಳು, ಹಿತೈಷಿಗಳು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ಇಂದು ಮಡಿವಾಳ ಕಟ್ಟೆಯಲ್ಲಿ ದಹನ
ಇಂದು ಅಪರಾಹ್ನ ಎರಡು ಗಂಟೆಗೆ ಮಹಾಲಿಂಗೇಶ್ವರ ದೇವಳದ ಮಡಿವಾಳ ಕಟ್ಟೆಯಲ್ಲಿ ದೇಹದ ದಹನ ಕಾರ್ಯ ನಡೆಸಲಾಗುವುದು ಎಂದು ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ದಾಮೋದರ ನಂದಿಲ ತಿಳಿಸಿದ್ದಾರೆ.
























