ಕೆಎಸ್‌ಸಿಎ ಪ್ರಮುಖರೆಲ್ಲಾ ರಾತ್ರೋರಾತ್ರಿ ಎಸ್ಕೇಪ್?
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಆದರೆ ಕೆಲವು ಪ್ರಮುಖ ಆರೋಪಿಗಳು ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.
ಡಿಎನ್‌ಎ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮೂವರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಒಬ್ಬರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಎನ್‌ಎ ಇವೆಂಟ್ ಮ್ಯಾನೇಜ್ಮೆಂಟ್‌ನ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ವಿನೋದ್, ಕೆಎಸ್‌ಸಿಎ ಪ್ರತಿನಿಧಿ ಹೆಸರು ಬಹಿರಂಗಪಡಿಸಿಲ್ಲ. ಕೆಎಸ್‌ಸಿಎ ಪ್ರಮುಖರೆಲ್ಲಾ ನಿನ್ನೆ ರಾತ್ರಿಯೇ ಎಸ್ಕೇಪ್ ಆಗಿದ್ದು, ಅವರ ಮನೆಗಳಿಗೂ ತೆರಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆಂದು ತಿಳಿದುಬಂದಿದೆ.
ಕಾಲ್ತುಳಿತ ಪ್ರಕರಣ ಸಂಬಂಧ ಗುರುವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಸಿಎಂ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ತಿಳಿಸಿದ್ದರು. ಕಾಲ್ತುಳಿತಕ್ಕೆ ಕಾರಣರಾದ ಆರ್‌ಸಿಬಿ ಆಡಳಿತ ಮಂಡಳಿ, ಡಿಎನ್‌ಎ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಹಾಗೂ ಕೆಎಸ್‌ಸಿಎ ಪ್ರತಿನಿಧಿಗಳನ್ನು ಬಂಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ದಿಢೀರನೆ ವಿಜಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಹರಿದುಬಂದ ಕಾರಣ ಎಲ್ಲ ಸಂಭ್ರಮ ಕ್ಷಣಾರ್ಧದಲ್ಲಿ ಸೂತಕವಾಗಿ ಪರಿಣಮಿಸಿತು. ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
























