ಬೆಂಗಳೂರು ಪೊಲೀಸ್‌ ಆಯುಕ್ತರ ತಲೆದಂಡಕ್ಕೆ ಸಾರ್ವಜನಿಕರಿಂದ ಆಕ್ಷೇಪ

ಅಮಾನತಿಗೆ ಕಾರಣ ಕೊಟ್ಟ ಸರ್ಕಾರ

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಬಲಿಯಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆಗೆ ಬೆಂಗಳೂರು ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸಹಿತ ಕೆಲವು ಪೊಲೀಸ್‌ ಅಧಿಕಾರಿಗಳನ್ನು ಹೊಣೆ ಮಾಡಿರುವ ಸರ್ಕಾರ ನಿನ್ನೆ ಅವರನ್ನು ಅಮಾನತಿನಲ್ಲಿಟ್ಟಿದೆ.

ಆದರೆ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿರುವ ಬಿ.ದಯಾನಂದ್‌ ಅವರ ತಲೆದಂಡಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಆಕ್ಷೇಪ ವ್ಯಕ್ತವಾಗಿದೆ. ಸರ್ಕಾರ ತಾನು ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸರ ತಲೆದಂಡ ಮಾಡಿದೆ. ಅದರಲ್ಲೂ ಕೆರಿಯರ್‌ನಲ್ಲಿ ಒಂದೇ ಒಂದು ಕಪ್ಪುಚುಕ್ಕೆಯೂ ಇಲ್ಲದ ಬಿ.ದಯಾನಂದ್‌ ಅವರನ್ನು ಹೊಣೆ ಮಾಡಿ ಅಮಾನತಿನಲ್ಲಿಟ್ಟಿರುವುದು ಅಧಿಕಾರದ ದುರುಪಯೋಗದ ಪರಾಕಾಷ್ಠೆ ಎಂದು ಅನೇಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





















































 
 

ಹೀಗೆ ತನ್ನ ನಡೆಗೆ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗುತ್ತಲೇ ಸರ್ಕಾರ ಬಿ.ದಯಾನಂದ್‌ ಅವರ ಅಮಾನತಿಗೆ ಕಾರಣ ಕೊಟ್ಟಿದೆ. ಆರ್​ಸಿಬಿ ವಿಜಯ ಯಾತ್ರೆಯನ್ನು ಸರ್ಕಾರ ಆಯೋಜಿಸಿದ್ದು ಎಂದೇ ಎಲ್ಲರೂ ಭಾವಿಸಿದ್ದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್​ಸಿಬಿ ಆಟಗಾರರಿಗೆ ಸನ್ಮಾನ ಮಾಡಿದ್ದರಿಂದ ಇದು ಸರ್ಕಾರಿ ಕಾರ್ಯಕ್ರಮ ಎಂದೇ ಭಾವಿಸಲಾಗಿತ್ತು. ಆದರೆ ತನ್ನ ಪ್ರಕಟಣೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ ಜೂನ್ 3ರಂದು ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯ ಯಾತ್ರೆ ಮತ್ತು ಸಂಭ್ರಮಾಚರಣೆ ಆಯೋಜಿಸುತ್ತೇವೆ ಎಂದು ಆರ್​ಸಿಬಿಯ ಸಿಇಒ ತಿಳಿಸಿದ್ದರು.

ಆದರೆ ಈ ಬಗ್ಗೆ ದಯಾನಂದ್ ಆಯೋಜಕರಿಗೆ ಲಿಖಿತ ಉತ್ತರ ನೀಡಿ ಅನುಮತಿ ನಿರಾಕರಿಸಲು ವಿಫಲರಾಗಿದ್ದಾರೆ. ಸಮಯಾವಕಾಶ ಸಾಕಾಗುವುದಿಲ್ಲ ಎಂದು ಅವರು ಅನುಮತಿ ನಿರಾಕರಿಸಬೇಕಿತ್ತು ಎಂದು ಪ್ರಕಟಣೆಯಲ್ಲಿ ಕಾರಣ ನೀಡಲಾಗಿದೆ. ಅರ್ಧ ದಿನದಲ್ಲಿ ಸಿದ್ಧತೆ ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಲಿಖಿತವಾಗಿ ಅನುಮತಿ ನಿರಾಕರಿಸಿದ್ದಾರೆ ಎಂಬ ಕಾರಣ ನೀಡಿ ದಯಾನಂದ್ ಅವರನ್ನು ಅಮಾನತು ಮಾಡಲಾಗಿದೆ.

ಜೂನ್ 4ರ ಬುಧವಾರ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆರ್​ಸಿಬಿ ವಿಜಯ ಯಾತ್ರೆಯನ್ನು ನೋಡಲು ಆಗಮಿಸಿದ್ದ ಲಕ್ಷಾಂತರ ಜನರ ನಡುವೆ ಕಾಲ್ತುಳಿತ ಉಂಟಾಗಿ 11 ಜನರು ಸಾವನ್ನಪ್ಪಿದ್ದರು. 50 ಜನರಿಗೆ ಗಾಯಗಳಾಗಿವೆ. ಅವರಲ್ಲಿ ಇನ್ನೂ ಅನೇಕ ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್​ಸಿಬಿಯ ಸಂಭ್ರಮಾಚರಣೆಯನ್ನು ಮಾಡಬೇಕಾಗಿದ್ದ ಕರ್ನಾಟಕದಲ್ಲಿ ಸೂತಕದ ಛಾಯೆ ಆವರಿಸಿದೆ.

ಇದಾದ ನಂತರ ಸರ್ಕಾರದ ವೈಫಲ್ಯದ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ದುರಂತದ ಬಗ್ಗೆ ಸಿದ್ದರಾಮಯ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಜೊತೆಗೆ ಸಿಐಡಿ ತನಿಖೆಗೂ ಆದೇಶಿಸಿದೆ. ಇದೆಲ್ಲದರ ನಡುವೆ ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳುವ ಪ್ರಯತ್ನ ಮಾಡಿರುವ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಸೇರಿದಂತೆ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಪೊಲೀಸ್ ಆಯುಕ್ತ ಬಿ. ದಯಾನಂದ್, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಎಚ್‌.ಟಿ.ಶೇಖರ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಎಸಿಪಿ ಬಾಲಕೃಷ್ಣ, ಕಬ್ಬನ್‌ಪಾರ್ಕ್‌ ಇನ್‌ಸ್ಪೆಪೆಕ್ಟರ್‌ ಗಿರೀಶ್‌ ಎ.ಕೆ ಅವರನ್ನು ಅಮಾನತು ಮಾಡಲಾಗಿದೆ.

ಈ ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಿದ್ದೇವೆ. ಎಫ್​ಐಆರ್ ಆಧಾರದ ಮೇಲೆ ಸಿಐಡಿ ತನಿಖೆ ನಡೆಸಲಿದೆ. 30 ದಿನದಲ್ಲಿ ನ್ಯಾಯಾಂಗ ತನಿಖೆ ಮುಗಿಸಲು ಸೂಚಿಸಲಾಗಿದೆ. ಗುಪ್ತಚರ ಇಲಾಖೆಯ ಲೋಪವೂ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಲಾಗಿದ್ದು, ಈ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಏಕವ್ಯಕ್ತಿ ಆಯೋಗವನ್ನು ನೇಮಿಸಿದ್ದೇವೆ ಎಂದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top