ಮಳೆ ಬಂದರೆ ಫಲಿತಾಂಶ ಏನಾಗಬಹುದು?
ಅಹಮದಾಬಾದ್ : ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಕಾದಾಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಇದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಮಧ್ಯೆ ಹಣಾಹಣಿ ನಡೆಯಲಿದ್ದು, ಯಾರು ಗೆದ್ದರೂ ಐಪಿಎಲ್‌ಗೆ ಹೊಸ ಚಾಂಪಿಯನ್ ಸಿಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರೆ, ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಎಂಟ್ರಿಕೊಟ್ಟಿದೆ. 17 ವರ್ಷಗಳ ನಂತರ ಎರಡೂ ತಂಡಗಳಿಗೆ ಐಪಿಎಲ್ ಪ್ರಶಸ್ತಿ ಗೆಲ್ಲುವ ಅವಕಾಶ ಸಿಕ್ಕಿದೆ. ಆದಾಗ್ಯೂ ಈ ಪಂದ್ಯಕ್ಕೆ ಮಳೆಯ ಆತಂಕವಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅಂತಿಮ ಪಂದ್ಯದಲ್ಲೂ ಮಳೆಯಾಗುವ ಸಾಧ್ಯತೆಯಿದೆ. ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು ಮಳೆ ಬರಬಹುದು ಎಂದು ವರದಿಯಾಗಿದೆ.
ಪಂಜಾಬ್-ಮುಂಬೈ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಕೊನೆಗೂ ಮಳೆ ನಿಂತ ಮೇಲೆ ಸುಮಾರು 2.30 ಗಂಟೆಯ ನಂತರ ಪಂದ್ಯ ಆಡಿಸಲಾಗಿತ್ತು. ಮಳೆ ನಿಂತ ಬಳಿಕ ಪೂರ್ಣ 20 ಓವರ್‌ಗಳನ್ನು ಆಡಿಸಲಾಗಿತ್ತು. ಅಹಮದಾಬಾದ್‌ನಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ. ಮಳೆ ಬಂದರೂ ದೊಡ್ಡ ಮಟ್ಟದ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಪ್ರತಿ ದೊಡ್ಡ ಕ್ರಿಕೆಟ್ ಟೂರ್ನಿಗೆ ಇರುವಂತೆ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ.
ಒಂದು ವೇಳೆ ಮಂಗಳವಾರ ಪಂದ್ಯ ಸಾಧ್ಯವಾಗದೆ ಹೋದರೆ ಮೀಸಲು ದಿನವಾದ ಬುಧವಾರ ಪಂದ್ಯ ನಡೆಯಲಿದೆ. ಒಂದು ವೇಳೆ ಎರಡೂ ದಿನ ಪಂದ್ಯ ನಡೆಯದೆ ಇದ್ದರೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಚಾಂಪಿಯನ್ ಆಗಲಿದೆ.
ಲೀಗ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ತಲಾ 19 ಅಂಕ ಸಂಪಾದಿಸಿದ್ದರೂ ನೆಟ್ ರನ್ ರೇಟ್‌ನಲ್ಲಿ ಪಂಜಾಬ್ ಮುಂದಿದೆ. ಆರ್‌ಸಿಬಿ 0.301 ನೆಟ್ ರನ್ ರೇಟ್ ಹೊಂದಿದ್ದರೆ ಪಂಜಾಬ್ 0.372 ಹೊಂದಿದೆ. 0.071 ಅಂಕ ಹೆಚ್ಚಿರುವ ಕಾರಣ ಪಂಜಾಬ್ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
ಇತಿಹಾಸ ಸೃಷ್ಟಿ
ಇಲ್ಲಿಯವರೆಗೆ ಪಂಜಾಬ್ ಕಿಂಗ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಒಮ್ಮೆಯೂ ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. 2025ರ ಐಪಿಎಲ್ ಅನ್ನು ಯಾವ ತಂಡ ಗೆದ್ದರೂ ಅದು ಮೊದಲ ಬಾರಿಗೆ ಈ ಭವ್ಯವಾದ ಟೂರ್ನಮೆಂಟ್‌ನ ಟ್ರೋಫಿಯನ್ನು ಗೆಲ್ಲುತ್ತದೆ. ಮುಂಬರುವ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರು ತಮ್ಮ ಶೇಕಡಾ 100 ರಷ್ಟು ಪ್ರದರ್ಶನ ನೀಡುವುದು ಈಗ ಬಹಳ ಮುಖ್ಯವಾಗಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ. ಈ ಮೈದಾನದಲ್ಲಿ ನಡೆದ ಕ್ವಾಲಿಫೈಯರ್ 2 ಸುತ್ತಿನ ಪಂದ್ಯದಲ್ಲಿ ಒಟ್ಟು 410 ರನ್‌ಗಳು ದಾಖಲಾಗಿದ್ದವು. ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಹಾಗೆಯೇ ಈ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದೆ. ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಬರೋಬ್ಬರಿ 243 ರನ್ ಕಲೆಹಾಕಿತ್ತು. ಆದಾಗ್ಯೂ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್‌ಗೆ ಆದ್ಯತೆ ನೀಡುವುದನ್ನು ಕಾಣಬಹುದು.
ಈ ಮೈದಾನದಲ್ಲಿ ಒಟ್ಟು 42 ಐಪಿಎಲ್ ಪಂದ್ಯಗಳನ್ನು ಆಡಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 20 ಪಂದ್ಯಗಳನ್ನು ಗೆದ್ದಿದ್ದರೆ, ಬೆನ್ನಟ್ಟಿದ ತಂಡವು 22 ಪಂದ್ಯಗಳನ್ನು ಗೆದ್ದಿದೆ. ಇದು ಈ ಪಿಚ್‌ನಲ್ಲಿ ಗುರಿಯನ್ನು ಬೆನ್ನಟ್ಟಲು ಸ್ವಲ್ಪ ಸುಲಭಗೊಳಿಸುತ್ತದೆ. ಹಾಗಾಗಿ, ಈ ಸೀಸನ್‌ನಲ್ಲಿ ಮೊದಲು ಬ್ಯಾಟ್ ಮಾಡಿದ 8 ತಂಡಗಳಲ್ಲಿ 6 ತಂಡಗಳು ಗೆದ್ದಿರಬಹುದು. ಆದರೆ ಒಟ್ಟಾರೆಯಾಗಿ, ನಂತರ ಬ್ಯಾಟಿಂಗ್ ಮಾಡುವುದು ಪ್ರಯೋಜನಕಾರಿ.