ಚಿತ್ರ ಪ್ರದರ್ಶಿಸಿದರೆ ಥಿಯೇಟರ್‌ಗೆ ಬೆಂಕಿ ಹಚ್ಚುವ ಎಚ್ಚರಿಕೆ
ಬೆಂಗಳೂರು : ತಮಿಳು ಭಾಷೆಯಿಂದ ಕನ್ನಡ ಹುಟ್ಟಿದ್ದು ಎಂಬ ಉದ್ದಟತನದ ಹೇಳಿಕೆ ನೀಡಿದ್ದಲ್ಲದೆ ಇದಕ್ಕಾಗಿ ಕ್ಷಮೆ ಯಾಚಿಸದೆ ಮೊಂಡಾಟ ಮಾಡಿ ಕನ್ನಡಿಗರನ್ನು ಕೆಣಕಿರುವ ಮೇರುನಟ ಕಮಲಹಾಸನ್‌ಗೆ ಕರ್ನಾಟಕದಲ್ಲಿ ಬ್ಯಾನ್ ಬಿಸಿ ತಟ್ಟಿದೆ. ಮುಂಬರುವ ಜೂ.5ರಂದು ಬಿಡುಗಡೆಯಾಗಲಿರುವ ಕಮಲಹಾಸನ್ ಅಭಿನಯದ ಥಗ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡದಿರಲು ಕನ್ನಡಪರ ಸಂಘಟನೆಗಳು ತೀರ್ಮಾನಿಸಿವೆ.
ಅಧಿಕಪ್ರಸಂಗಿ ಹೇಳಿಕೆ ನೀಡಿದ ಬಳಿಕ ನಾನು ತಪ್ಪೇ ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಪಟ್ಟು ಹಿಡಿದಿರುವ ಕಮಲಹಾಸನ್‌ಗೆ ತಕ್ಕ ಪಾಠ ಕಲಿಸಲು ಕನ್ನಡಿಗರು ತೀರ್ಮಾನಿಸಿದ್ದಾರೆ. ಹೀಗಾಗಿ ಜೂನ್ 5ರಂದು ರಿಲೀಸ್‌ಗೆ ಸಜ್ಜಾಗಿರುವ ‘ಥಗ್ ಲೈಫ್’ ಚಿತ್ರದ ಪ್ರದರ್ಶನಕ್ಕೆ ಬ್ಯಾನ್ ಬಿಸಿ ತಟ್ಟಿದೆ. ಕನ್ನಡಿಗರಿಗೆ ಕ್ಷಮೆಯಾಚಿಸಲು ಕಮಲಹಾಸನ್‌ಗೆ ಕೊಟ್ಟ ಗಡುವು ಮುಗಿದಿದೆ. ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಸ್ಕ್ರಿನ್‌ಗಳಲ್ಲಿ ರಿಲೀಸ್‌ಗೆ ರೆಡಿಯಿರುವ ‘ಥಗ್ ಲೈಫ್’ ಚಿತ್ರ ಪ್ರದರ್ಶನ ಮಾಡದಂತೆ ಥಿಯೇಟರ್‌ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಒಂದು ವೇಳೆ ಚಿತ್ರ ಪ್ರದರ್ಶನಕ್ಕೆ ಮುಂದಾದರೆ ಥಿಯೇಟರ್‌ಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿವೆ.
ಥಗ್ ಲೈಫ್ ಚಿತ್ರದ ಹಂಚಿಕೆಯ ಹಕ್ಕನ್ನು ಪಡೆದಿದ್ದ ವೆಂಕಟೇಶ್ ಹಣ ವಾಪಸ್ ಕೊಡಲು ಮುಂದಾಗಿದ್ದಾರೆ. ರಿಲೀಸ್‌ಗೆ ಅಡ್ಡಿಯಾದರೂ ಪರವಾಗಿಲ್ಲ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿದ್ದಾರೆ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಕಮಲಹಾಸನ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
























