ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಲೋಕಾರ್ಪಣೆ ಸೇರಿಸಿದಂತೆ ಸುಮಾರು 16 ಸಾವಿರ ಕೋಟಿ ರೂ. ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಭಾನುವಾರ ಮಧ್ಯಾಹ್ನ 12 ಗಂಟೆಗೆ ಮೋದಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 3:15ಕ್ಕೆ ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವರ್ಷದ ಆರಂಭದಿಂದ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ನಾಳೆಯ ಭೇಟಿ ಸೇರಿ 6ನೇ ಬಾರಿ ಭೇಟಿ ನೀಡುತ್ತಿದ್ದಾರೆ. 8,480 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 118 ಕಿ.ಮೀ. ಷಟ್ಪಥ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯನ್ನು (NH-275) ಪ್ರಧಾನಮಂತ್ರಿಯವರು ಲೋಕಾರ್ಪಣೆಗೊಳಿಸಲಿದ್ದಾರೆ. 92 ಕಿಮೀ ಉದ್ದದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 4,130 ಕೋಟಿ ರೂ. ಯೋಜನೆ ಬೆಂಗಳೂರಿನೊಂದಿಗೆ ಕುಶಾಲನಗರದ ಸಂಪರ್ಕ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಮಾರು 5 ಗಂಟೆಗಳ ಪ್ರಯಾಣವನ್ನು ಕೇವಲ 2.5 ಗಂಟೆಗೆ ಇಳಿಸುತ್ತದೆ.
ಧಾರವಾಡದಲ್ಲಿ 2019ರಲ್ಲಿ ಮೋದಿ ಐಐಟಿಗೆ ಶಂಕುಸ್ಥಾಪನೆ ಮಾಡಿದ್ದರು. 850 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಐಐಟಿ ಕಟ್ಟಡವನ್ನು ಅವರು ನಾಳೆ ಉದ್ಘಾಟಿಸಲಿದ್ದಾರೆ. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ಉದ್ದದ ರೈಲ್ವೇ ಪ್ಲಾಟ್ಫಾರ್ಮ್ ಸುಮಾರು 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 1,507 ಮೀಟರ್ ಉದ್ದದ ಪ್ಲಾಟ್ಫಾರ್ಮ್ ನಾಳೆ ಲೋಕಾರ್ಪಣೆಗೊಳ್ಳಲಿದೆ. ಇದಲ್ಲದೆ, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಹೊಸಪೇಟೆ ನಿಲ್ದಾಣದ ಮೇಲ್ದರ್ಜೆಗೆ ಏರಿಸಲಾಗಿದ್ದು, ಪ್ರಧಾನಿಯವರು ಉದ್ಘಾಟಿಸಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನೂ ಮೋದಿ ನೆರವೇರಿಸಲಿದ್ದಾರೆ. ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ ಸುಮಾರು 520 ಕೋಟಿ ರೂ. ಹುಬ್ಬಳ್ಳಿಯ ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆಯನ್ನೂ ಅವರು ನೆರವೇರಿಸಲಿದ್ದಾರೆ. 250 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಅಭಿವೃದ್ಧಿ ಪಡಿಸಲಿದ್ದು, ತೃತೀಯ ಹಂತದ ಹೃದ್ರೋಗ ಚಿಕಿತ್ಸೆ ನೀಡಲಾಗುವುದು.