ಕಳಸದ ರೆಸಾರ್ಟ್ನಲ್ಲಿ ಪಾರ್ಟಿ ಮಾಡಿರುವ ಫೋಟೊ ಬಹಿರಂಗ
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿರುವ ಆರೋಪಿಗಳು ಭರ್ಜರಿ ಪಾರ್ಟಿ ಮಾಡಿರುವ ಫೋಟೊ ಬಹಿರಂಗವಾಗಿದೆ. ಕಳಸದ ರೆಸಾರ್ಟ್ ಒಂದರಲ್ಲಿ ಏ.2ರಂದು ಆರೋಪಿಗಳು ನೈಟ್ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಪಾರ್ಟಿಯಲ್ಲೇ ಹತ್ಯೆಯ ಸ್ಕೆಚ್ ಫೈನಲ್ ಮಾಡಿರುವ ಅನುಮಾನ ಇದೆ.
ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳಾದ ಮುಝಮ್ಮಿಲ್, ನಿಯಾಜ್ ಹಾಗೂ ಚಿಕ್ಕಮಗಳೂರು ಮೂಲದ ರಂಜಿತ್ ಕ್ಯಾಂಪ್ ಫೈರ್ ಹಾಕಿ ಪಾರ್ಟಿ ಮಾಡಿದ್ದಾರೆ. ಈ ಮೂವರ ಜೊತೆ ಇನ್ನೂ ಐವರು ಅಪರಿಚಿತರು ಪಾರ್ಟಿಯಲ್ಲಿ ಭಾಗಿಯಾಗಿರುವುದು ಕಂಡುಬರುತ್ತಿದೆ. ಇವರು ಯಾರೆಂದು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಈ ಪಾರ್ಟಿಯಲ್ಲಿ ರಂಜಿತ್ನನ್ನು ಮುಝಮ್ಮಿಲ್ಗೆ ನಿಯಾಜ್ ಪರಿಚಯ ಮಾಡಿಕೊಟ್ಟಿದ್ದ. ಈ ಪಾರ್ಟಿಯಲ್ಲೇ ಸುಹಾಸ್ ಹತ್ಯೆ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಸುಹಾಸ್ ಶೆಟ್ಟಿ ಹತ್ಯೆಗೆ ಫಾಝಿಲ್ ಸಹೋದರ ಆದಿಲ್ 5 ಲಕ್ಷ ರೂ. ಸುಪಾರಿ ನೀಡಿದ್ದ. ಈ ಹಣದ ಪೈಕಿ 3 ಲಕ್ಷ ರೂ.ಹಣವನ್ನು ಮುಂಗಡವಾಗಿ ಪಾವತಿಸಲಾಗಿತ್ತು ಎಂಬುದಾಗಿ ಪೊಲೀಸರೇ ತಿಳಿಸಿದ್ದಾರೆ. ಈ ಹಣದಲ್ಲೇ ಪಾರ್ಟಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಮಂಗಳೂರಿನ ಮೊಹಮ್ಮದ್ ಮುಝಮ್ಮಿಲ್ 4 ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಬಂದಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಮೇಸ್ತ್ರಿ ಕೆಲಸ ಮಾಡುತ್ತಿರುವ ನಿಯಾಜ್ ಬಜ್ಪೆ ಶಾಂತಿಗುಡ್ಡೆ ಮಸೀದಿ ಬಳಿ ನೆಲೆಸಿದ್ದ. ಕಳಸ ತಾಲೂಕಿನ ರುದ್ರಪಾದದ ರಂಜಿತ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಸುಹಾಸ್ ಮೇಲೆ ದಾಳಿ ಮಾಡಲು ಈತನೇ ಲಾಂಗ್ ತಂದುಕೊಟ್ಟವ ಎನ್ನಲಾಗಿದೆ.
























