ಯುದ್ಧದ ಕಾರ್ಮೋಡ : ಭಾರತೀಯ ಸೇನೆಯಿಂದ ರಾತ್ರಿ ಅಣಕು ಸಮರ

ಎಲ್ಲ ದೀಪಗಳನ್ನು ಆರಿಸಿ ಅರ್ಧ ತಾಸು ಯುದ್ಧಾಭ್ಯಾಸ ಮಾಡಿದ ಸೇನೆ

ಹೊಸದಿಲ್ಲಿ : ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಯುದ್ಧದ ಕಾರ್ಮೋಡ ಕವಿದಿರುವಂತೆಯೇ ಭಾರತೀಯ ಸೇನೆ ನಿನ್ನೆ ರಾತ್ರಿ ಪಂಜಾಬ್‌ನ ಫಿರೋಜ್‌ಪುರ ಗಡಿ ಭಾಗದಲ್ಲಿ ಅಣಕು ಸಮರ ನಡೆಸಿದೆ.

ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವಿನ ಉದ್ವಿಗ್ನ ನೆಲೆಸಿದೆ. ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಬಹುದು ಎಂಬ ಪರಿಸ್ಥಿಯಿದ್ದು, ಭಾರತ ಯುದ್ಧದ ತಯಾರಿಯನ್ನು ಆಗಲೇ ಪ್ರಾರಂಭಿಸಿದೆ.





















































 
 

ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪಂಜಾಬ್‌ನ ಫಿರೋಜ್‌ಪುರ ಗಡಿ ಭಾಗದಲ್ಲಿ ಭಾನುವಾರ ರಾತ್ರಿ 9ರಿಂದ 9.30ರ ತನಕ ಮಾಕ್ ಡ್ರಿಲ್ ನಡೆಸಿದೆ. ಮಾಕ್ ಡ್ರಿಲ್ ನಡೆಸುವ ಉದ್ದೇಶದಿಂದ ಪಂಜಾಬ್ ರಾಜ್ಯ ವಿದ್ಯುತ್ ನಿಗಮ 30 ನಿಮಿಷಗಳ ಕಾಲ ವಿದ್ಯುತ್ ಕಡಿತಗೊಳಿಸಿತ್ತು. ಗಡಿಭಾಗದಲ್ಲಿರುವ ಜನರು ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಲೈಟ್ ಉರಿಸದಂತೆ ಮನವಿ ಮಾಡಲಾಗಿತ್ತು. ಜೊತೆಗೆ ಲೌಡ್ ಸ್ಪೀಕರ್ ಮೂಲಕ ಗ್ರಾಮಗಳಿಗೆ ತೆರಳುವಂತೆ ಘೋಷಣೆ ಮಾಡಲಾಯಿತು. ಮಾಕ್ ಡ್ರಿಲ್ ನಡೆದ 30 ನಿಮಿಷಗಳ ಕಾಲ ನಿರಂತರವಾಗಿ ಹೂಟರ್‌ಗಳು ಸದ್ದು ಮಾಡುತ್ತಿದ್ದವು.

ಹಿರಿಯ ಅಧಿಕಾರಿಗಳ ಆದೇಶದಂತೆ ದೀಪಗಳನ್ನು ಸಂಪೂರ್ಣವಾಗಿ ಆರಿಸಲಾಗಿತ್ತು. ಯಾವುದೇ ವಾಹನ ಲೈಟ್‌ಗಳನ್ನು ಆನ್ ಮಾಡದಂತೆ ಸೂಚಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಪಂಜಾಬ್ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದರು.

ಜೈಲುಗಳ ಮೇಲೆ ದಾಳಿ ಭೀತಿ

ಈ ನಡುವೆ ಬಹುತೇಕ ಉಗ್ರರೇ ತುಂಬಿರುವ ಜಮ್ಮು ಮತ್ತು ಕಾಶ್ಮೀರದ ಜೈಲುಗಳ ಮೇಲೆ ಭಯೋತ್ಪಾದಕರ ದಾಳಿಯ ಬೆದರಿಕೆ ಇದೆ ಎಂದು ಗುಪ್ತಚರ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಜೈಲುಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಗುಪ್ತಚರ ಮಾಹಿತಿಯ ಪ್ರಕಾರ ಶ್ರೀನಗರದ ಕೇಂದ್ರ ಜೈಲು ಮತ್ತು ಜಮ್ಮುವಿನ ಕೋಟ್ ಬಲ್ವಾಲ್ ಜೈಲುಗಳನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಲು ಸಂಚು ಮಾಡಿದ್ದಾರೆ.

ಈ ಜೈಲುಗಳಲ್ಲಿ ಪ್ರಸ್ತುತ ಭಯೋತ್ಪಾದಕರು ಹಾಗೂ ಭೂಗತ ಲೋಕದ ಕೊಲೆ ಪಾತಕಿಗಳಿದ್ದಾರೆ. ಅವರು ದಾಳಿಗಳಲ್ಲಿ ನೇರವಾಗಿ ಭಾಗಿಯಾಗದಿದ್ದರೂ ಲಾಜಿಸ್ಟಿಕ್‌ ಸಹಾಯ, ಆಶ್ರಯ ಮತ್ತು ಅವರ ಓಡಾಟ ಸುಗಮಗೊಳಿಸುವ ಮೂಲಕ ಭಯೋತ್ಪಾದಕರಿಗೆ ಬೆಂಬಲ ನೀಡಿದವರಾಗಿರುತ್ತಾರೆ.

ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಇದರ ಹೊಣೆಯನ್ನು ಲಷ್ಕರ್ ಎ ತೊಯ್ಬಾದ ಟಿಆರ್​ಎಫ್​ ಹೊತ್ತುಕೊಂಡಿತ್ತು. ಬಳಿಕ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾದ ನಂತರ ಹೇಳಿಕೆಯಿಂದ ಹಿಂದೆ ಸರಿದಿತ್ತು.

ಇಸ್ಲಾಂ ಇರುವ ತನಕ ಭಯೋತ್ಪಾದನೆ ಇರುತ್ತದೆ

ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತವಾಗಿರುತ್ತದೆ ಎಂದು ಬಾಂಗ್ಲಾದೇಶ ಮೂಲದ ಪ್ರಸಿದ್ಧ ಲೇಖಕಿ ತಸ್ಲಿಮಾ ನಸ್ರೀನ್‌ ಹೇಳಿದ್ದಾರೆ.
ದೆಹಲಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು 2016ರ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಹೋಲಿಸಿ ಈ ಹೇಳಿಕೆ ನೀಡಿದ್ದಾರೆ.

ಕಳೆದ 1,400 ವರ್ಷಗಳಲ್ಲಿ ಇಸ್ಲಾಂ ವಿಕಸನಗೊಂಡಿಲ್ಲ. ಅದು ವಿಕಸನಗೊಳ್ಳುವವರೆಗೆ ಭಯೋತ್ಪಾದಕರನ್ನು ಬೆಳೆಸುತ್ತಲೇ ಇರುತ್ತದೆ. 2016ರ ಢಾಕಾ ದಾಳಿಯಲ್ಲಿ ಕಲ್ಮಾವನ್ನು ಪಠಿಸದ್ದಕ್ಕೆ ಜನರನ್ನು ಹತ್ಯೆ ಮಾಡಲಾಯಿತು. ಧರ್ಮ ನಮ್ಮ ನಂಬಿಕೆ ವಿವೇಚನೆ ಮತ್ತು ಮಾನವೀಯತೆಯನ್ನು ಮೀರಿದಾಗ ಹೀಗೆ ಆಗುತ್ತದೆ ಎಂದು ತಿಳಿಸಿದರು.

ಯುರೋಪ್‌ನಲ್ಲಿ ಚರ್ಚುಗಳು ವಸ್ತುಸಂಗ್ರಹಾಲಯಗಳಾಗಿ ಬದಲಾಗುತ್ತಿದ್ದರೆ ಮುಸ್ಲಿಮರು ಎಲ್ಲೆಡೆ ಮಸೀದಿಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಾವಿರಾರು ಮಸೀದಿಗಳು ನಿರ್ಮಾಣವಾಗಿದ್ದರೂ ಮತ್ತಷ್ಟು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಮತ್ತಷ್ಟು ಜಿಹಾದಿಗಳು ತಯಾರಾಗುತ್ತಾರೆ. ಯಾವುದೇ ಮದರಸಗಳು ಇರಬಾರದು. ಮಕ್ಕಳು ಒಂದು ಪುಸ್ತಕವನ್ನು ಮಾತ್ರ ಓದಬಾರದು, ಎಲ್ಲ ಪುಸ್ತಕಗಳನ್ನು ಓದಬೇಕು ಎಂದು ಅಭಿಪ್ರಾಯಪಟ್ಟರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top