ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕುಂಬ್ರುಗ ಎಂಬಲ್ಲಿ ಬಡ ಕುಟುಂಬಕ್ಕೆ ವಿಜಯ ಸಾಮ್ರಾಟ್ ತಂಡ ನಿರ್ಮಾಣ ಮಾಡಿಕೊಟ್ಟ ಮನೆಯನ್ನು ಶಾಸಕ ಸಂಜೀವ ಮಠಂದೂರು ಅವರು ಕುಟುಂಬಕ್ಕೆ ಹಸ್ತಾಂತರಿಸಿದರು.
ಗೋಪಾಲಶೆಟ್ಟಿ ಅವರ ಕುಟುಂಬ ಭದ್ರವಾದ ಮನೆ ಇರದೇ ಪರಿತಪಿಸುತ್ತಿದ್ದ ಸಂಕಷ್ಟ ಹಾಗೂ ಈ ದಂಪತಿ ಪುತ್ರಿಯ ವಿದ್ಯಾಭ್ಯಾಸದ ಸಮಸ್ಯೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವರದಿಗೆ ಸ್ಪಂದಿಸಿದ ಯುವ ಉದ್ಯಮಿ ಸಹಜ್ ರೈ ಬಳಜ್ಜ ನೇತೃತ್ವದ ವಿಜಯ ಸಾಮ್ರಾಟ್ ತಂಡ, ಶಾಸಕ ಸಂಜೀವ ಮಠಂದೂರು ಅವರ ಉಪಸ್ಥಿತಿಯಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಬಳಿಕ ತಂಡದ ಸದಸ್ಯರು ಕೈಲಾದಷ್ಟು ನೆರವು ನೀಡಿ, ಕುಟುಂಬಕ್ಕಾಗಿ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಡಿ. ೧೦ರಂದು ಈ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗೋಪಾಲ ಶೆಟ್ಟಿ ದಂಪತಿ ದೀಪ ಬೆಳಗಿದರು. ಶಾಸಕ ಸಂಜೀವ ಮಠಂದೂರು ಹಾಗೂ ಅತಿಥಿಗಳು ಶ್ರೀ ಮಹಾಲಿಂಗೇಶ್ವರ ದೇವರ ಭಾವಚಿತ್ರವನ್ನು ನೀಡಿ, ಶುಭಹಾರೈಸಿದರು.ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಯುವ ಸಾಮ್ರಾಟ್ ತಂಡದ ಯುವಕರ ಕಾರ್ಯವನ್ನು ಶ್ಲಾಘಿಸಿದರು.
ಬನ್ನೂರು ಗ್ರಾಪಂ ಅಧ್ಯಕ್ಷೆ ಜಯ ಏಕ, ಪಿಡಿಒ ಚಿತ್ರಾ, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ, ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮುಖಂಡ ರಾಮದಾಸ್, ವಿಜಯ ಸಾಮ್ರಾಟ್ ತಂಡದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

























