ಬೆಂಗಳೂರು: ಪುತ್ರನ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಕೆಎಸ್ ಡಿಎಲ್ ಮಾಜಿ ಚೇರ್ಮನ್ ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪಗೆ ಹೈಕೋಟರ್ಸ್ ಏಕಸದಸ್ಯ ಪೀಠದಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ತುರ್ತು ವಿಚಾರಣೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಪುತ್ರ ಮಾಡಾಳ್ ಪ್ರಶಾಂತ್ ಮೇಲೆ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯ ನಂತರ ಅವರ ನಿವಾಸ ಮತ್ತು ಕಚೇರಿಯಲ್ಲಿ ಸಿಕ್ಕಿದ 8 ಕೋಟಿಗೂ ಅಧಿಕ ಲೆಕ್ಕಕ್ಕೆ ಸಿಗದ ನಗದು ಪ್ರಕರಣ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಆರು ಮಂದಿ ವಿರುದ್ಧ ಕೇಸು ದಾಖಲಾಗಿತ್ತು. ಸದ್ಯ ಮಧ್ಯಂತರ ಜಾಮೀನು ಮೂಲಕ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ.
ಇಂದು ವಿಚಾರಣೆ ನಡೆಸಿ ತೀರ್ಪು ನೀಡಿದ ಹೈಕೋರ್ಟ್ ನ ಏಕಸದಸ್ಯ ಪೀಠ ಶಾಸಕರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಪ್ರತಿ ಕೈಗೆ ಸಿಕ್ಕಿದ 48 ಗಂಟೆಗಳೊಳಗೆ ಶರಣಾಗುವಂತೆ ಶಾಸಕರಿಗೆ ಸೂಚಿಸಿದೆ. ಲೋಕಾಯುಕ್ತ ಪೊಲೀಸರು ಸೂಕ್ತ ದಾಖಲೆ ಸಲ್ಲಿಸುವವರೆಗೆ ಶಾಸಕರಿಗೆ ಜಾಮೀನು ಸಿಕ್ಕಿದೆ. ಮಧ್ಯಂತರ ಜಾಮೀನು ಆದೇಶ ನೀಡುವ ವೇಳೆ ಶಾಸಕರು 5 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಹಾಕುವಂತೆ ಷರತ್ತು ವಿಧಿಸಲಾಗಿದೆ. ಬಂಧನ ಭೀತಿಯಲ್ಲಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದರು.