ಅರಬ್ಬೀ ಸಮುದ್ರದ ಆಂಟಿಸೈಕ್ಲೋನ್‌ನಿಂದ ನಾಲ್ಕು ದಿನ ಬೀಸಿದ ಬಿಸಿಗಾಳಿ
ಮಂಗಳೂರು : ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾದ ಆಂಟಿಸೈಕ್ಲೋನ್ (Anticyclone) ಪರಿಣಾಮ ಕರಾವಳಿ ಪ್ರದೇಶದಲ್ಲಿ ನಾಲ್ಕು ದಿನ ಬಿಸಿಗಾಳಿ ಬೀಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಸೋಮವಾರದವರೆ ಬಿಸಿ ಗಾಳಿ ಬೀಸಿದೆ. ಈ ಬೇಸಿಗೆಯಲ್ಲಿ ಬಿಸಿಗಾಳಿ ಬೀಸಿರುವುದು ಇದೇ ಮೊದಲು. ಬಿಸಿಗಾಳಿಯಿಂದಾಗಿ ಶನಿವಾರ ಕೆಲವೆಡೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಸಾಮನ್ಯ ತಾಪಮಾನಕ್ಕಿಂತ 6 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿತ್ತು.
ಆಂಟಿಸೈಕ್ಲೋನ್‌ನಿಂದ ಪಶ್ಚಿಮ ಕರಾವಳಿಯಲ್ಲಿ ಬೆಚ್ಚಗಿನ ವಾತಾವರಣವಿರುತ್ತದೆ. ದಕ್ಷಿಣ ಕರಾವಳಿಯಲ್ಲಿ ಬಿಸಿ ಗಾಳಿ ಅಪರೂಪವಾಗಿದ್ದು, ಈ ಬಾರಿ ಕರಾವಳಿ ಕರ್ನಾಟಕದಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಂ. ಮೊಹಾಪಾತ್ರ ಹೇಳಿದ್ದಾರೆ.
ಪಶ್ಚಿಮ ಕರಾವಳಿಯ ಪ್ರದೇಶಗಳಲ್ಲಿ ಮಾರ್ಚ್‌ನಲ್ಲಿ ಬಿಸಿ ಗಾಳಿ ಬೀಸುತ್ತದೆ. ಮತ್ತು ಏಪ್ರಿಲ್ ಅಂತ್ಯ ಮತ್ತು ಮೇ ಆರಂಭದಲ್ಲಿ ಪೂರ್ವ ಕರಾವಳಿ ಪ್ರದೇಶಗಳಾದ ಒಡಿಶಾ ಮತ್ತು ಆಂಧ್ರ ಪ್ರದೇಶಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ಆಂಟಿಸೈಕ್ಲೋನ್‌ನಿಂದ ಪಶ್ಚಿಮ ಕರಾವಳಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಮಂಗಳವಾರದಿಂದ ಕರಾವಳಿ ಪ್ರದೇಶದಲ್ಲಿ ಬಿಸಿ ಗಾಳಿ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.