ಹಲವು ಅಸ್ತ್ರಗಳೊಂದಿಗೆ ದಾಳಿಗೆ ವಿಪಕ್ಷ ಸಿದ್ಧ : ಭಾರಿ ಜಟಾಪಟಿ ನಿರೀಕ್ಷೆ

ಇಂದಿನಿಂದ ವಿಧಾನ ಮಂಡಲ ಬಜೆಟ್‌ ಅಧಿವೇಶನ

ಬೆಂಗಳೂರು: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ, ಆರೋಪ- ಪ್ರತ್ಯಾರೋಪ, ಚರ್ಚೆಗೆ ವೇದಿಕೆ ಸಿದ್ಧವಾಗಿದೆ. ಗ್ಯಾರಂಟಿಯ ಪ್ರಯೋಜನಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪದಿರುವುದು ಸೇರಿದಂತೆ ಎರಡು ತಿಂಗಳಿನಿಂದ ಆಗಿರುವ ಬೆಳವಣಿಗೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಮೂಡಿದೆ.
ಹಾಡಹಗಲೇ ನಡೆದ ಬ್ಯಾಂಕ್‌ಗಳ ದರೋಡೆ, ಮೈಸೂರಿನ ಉದಯಗಿರಿ ಠಾಣೆ ಮೇಲಿನ ದಾಳಿ, ಅತ್ಯಾಚಾರ – ಹತ್ಯೆ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿತ, ಸುಗ್ರೀವಾಜ್ಞೆ ಬಳಿಕವೂ ನಿಲ್ಲದ ಮೈಕ್ರೊ ಫೈನಾನ್ಸ್‌ ಸಂಸ್ಥೆಗಳ ಹಾವಳಿ, ಎಸ್‌ಸಿಪಿ- ಟಿಎಸ್‌ಪಿ ಹಣ ಗ್ಯಾರಂಟಿಗೆ ಬಳಕೆ, ಗ್ಯಾರಂಟಿಗಳ ಸೌಲಭ್ಯ ವಿತರಣೆಯಲ್ಲಿ ವ್ಯತ್ಯಯ, ಕೆಪಿಎಸ್‌ಸಿ ಸರಣಿ ಅಕ್ರಮಗಳು, ಲೋಪಗಳು, ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವು, ಬೇಸಿಗೆಯಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆ, ಸರಕಾರಿ ಬಸ್‌, ಮೆಟ್ರೊ ಪ್ರಯಾಣ ದರ ಏರಿಕೆ, ಬೆಂಗಳೂರಿನ ಅಭಿವೃದ್ಧಿ ಕುಂಠಿತ, ಬಿಬಿಎಂಪಿ ವಿಭಜನೆಗೆ ಅವಕಾಶ ಕಲ್ಪಿಸುವ ಗ್ರೇಟರ್‌ ಬೆಂಗಳೂರು ವಿಧೇಯಕ ಸೇರಿದಂತೆ ಹಲವು ಅಸ್ತ್ರಗಳು ವಿಪಕ್ಷದ ಬತ್ತಳಿಕೆಯಲ್ಲಿವೆ.

ರಾಜ್ಯ ಸರಕಾರದ ವೈಫಲ್ಯಗಳ ಕುರಿತಂತೆ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿರುವ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಯೋಜಿತ ರೀತಿಯಲ್ಲಿ ಸರಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿವೆ. ಸರಕಾರದ ನಡೆಯನ್ನು ಸಮರ್ಥಿಸಿಕೊಂಡು ತಕ್ಕ ಉತ್ತರ ನೀಡಲು ಸಚಿವರು ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣ, ಅದರ ಮೇಲಿನ ಚರ್ಚೆ, ವಂದನಾ ನಿರ್ಣಯದ ಬೆನ್ನಲ್ಲೇ ಮಾ.7ಕ್ಕೆ ಬಜೆಟ್‌ ಮಂಡನೆಯಾಗಲಿದ್ದು, ಮಾ.21ರವರೆಗೆ ನಡೆಯಲಿದೆ.
ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು, ಗುರುವಾರ ವಂದನಾ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಮಾ.7ಕ್ಕೆ ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿಗೆ ಬಜೆಟ್‌ ಮಂಡಿಸಲಿದ್ದಾರೆ. ಇದು ಅವರು 16 ಬಾರಿಗೆ ಮಂಡಿಸಲಿರುವ ದಾಖಲೆಯ ಬಜೆಟ್‌ ಆಗಲಿದೆ. ಮಾ. 10 ರಿಂದ 21ರವರೆಗೆ ಬಜೆಟ್‌ ಮೇಲೆ ವಿಸ್ತೃತ ಚರ್ಚೆ ನಡೆಯಲಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಉಭಯ ಪಕ್ಷಗಳ ಹಿರಿಯ ನಾಯಕರು ಬಜೆಟೆಎ ಕುರಿತಾಗಿ ಚರ್ಚೆ ನಡೆಸಿದ್ದು, ಉಭಯ ಸದನಗಳಲ್ಲಿ ಪ್ರಸ್ತಾಪಿಸಬೇಕಾದ ಗಂಭೀರ ವಿಚಾರಗಳನ್ನು ಪಟ್ಟಿ ಮಾಡಿದ್ದಾರೆ. ಪರಸ್ಪರ ಸಮನ್ವಯದೊಂದಿಗೆ ಸದನಗಳಲ್ಲಿ ವಿಚಾರಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸಿದ್ದಾರೆ.
ಪಂಚ ಗ್ಯಾರಂಟಿಗಳನ್ನು ಸರಕಾರ ಜಾರಿಗೊಳಿಸಿದ್ದರೂ ಪ್ರತಿ ತಿಂಗಳು ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯ ಸಿಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ. ಮುಖ್ಯವಾಗಿ ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ ಮಾಸಿಕ 2000 ರೂ. ನೆರವು ಸಕಾಲದಲ್ಲಿ ಸಿಗುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿವೆ. ಜತೆಗೆ ಲಕ್ಷಾಂತರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿರುವ ಆರೋಪಗಳಿದ್ದು, ಅಧಿವೇಶನದಲ್ಲಿ ಈ ಬಗ್ಗೆ ಗಂಭೀರ ಚರ್ಚೆಯಾಗುವ ನಿರೀಕ್ಷೆ ಇದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top