ಬೆಂಗಳೂರು : ಲಂಚ ಪಡೆಯುವ ವೇಳೆ ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಪ್ರಶಾಂತ್ ಸೇರಿದಂತೆ ಐವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಶಾಂತ್ ಮಾಡಾಳ್ ಕೆಎಎಸ್ ಅಧಿಕಾರಿಯಾಗಿದ್ದು ಜಲಮಂಡಳಿ ಹಾಗೂ ಎಸಿಬಿ ಎರಡಲ್ಲೂ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ ರಾಸಾಯನಿಕ ಪೂರೈಸುವ ಟೆಂಡರ್ ನೀಡುವ ಸಲುವಾಗಿ 81 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ಕಚ್ಚಾ ಸಾಮಾಗ್ರಿ ಕಂಪನಿಯನ್ನು ನಡೆಸುತ್ತಿದ್ದ ಶ್ರೇಯಸ್ ಕಶ್ಯಪ್ ದೂರು ನೀಡಿರುವ ಹಿನ್ನೆಲೆಯಲ್ಲಿ, ಮಾಡಾಳ್ ಮೇಲೆ ಎಫ್‌ಐಆರ್ ದಾಖಲಿಸಿಕೊಂಡು ದಾಳಿ ಮಾಡಿ 1.62 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಡಿಐಜಿ ಸುಬ್ರಮಣ್ಯ ರಾವ್ ತಿಳಿಸಿದರು.
ಪ್ರಶಾಂತ್ ಮಾಡಾಳ್ ಅವರ ಸಂಬಂಧಿ ಸಿದ್ದೇಶ್, ಬಿಡಬ್ಲ್ಯುಎಸ್‌ಎಸ್‌ಬಿಯ ಅಕೌಂಟೆಂಟ್ ಸುರೇಂದ್ರ, ಹಣ ನೀಡಲು ಬಂದಿದ್ದ ನಿಕೋಲಸ್, ಗಂಗಾಧರ್ ಎನ್ನುವವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಮಾ.3ರಂದು ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
























