ಪುತ್ತೂರು : ಬಿಜೆಪಿ ಎಸ್.ಟಿ ಮೋರ್ಚಾ ವತಿಯಿಂದ ಎಸ್.ಟಿ.ಮೋರ್ಚಾ ಸಮಾವೇಶ ಮಾ.5 ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಎಂದಿ ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಂಜುನಾಥ ನಾಯ್ಕ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದುತ್ವ, ರಾಷ್ಟ್ರೀಯ ವಿಚಾರಧಾರೆ ಅಡಿಯಲ್ಲಿ ಬಿಜೆಪಿ ಸರಕಾರ ಎಸ್.ಟಿ. ಸಮಯದಾಯದ ಅಭಿವೃದ್ಧಿಗೆ ನಿರಂತರ ಕಾರ್ಯಪ್ರವೃತ್ತವಾಗಿದ್ದು, ಭಾರತದ ಅತ್ಯುನ್ನತ ರಾಷ್ಟ್ರಪತಿ ಸ್ಥಾನವನ್ನು ದ್ರೌಪದಿ ಮುರ್ಮು ಅವರಿಗೆ ನೀಡಿದ್ದು, ಅಲ್ಲದೆ ಸುರಂಗದ ಮೂಲಕ ಜಲಧಾರೆಯನ್ನು ಕಂಡುಕೊಂಡು ಬರಡು ನೆಲವನ್ನು ಹಸಿರಾಗಿಸಿದ ಅಮೈ ಮಹಾಲಿಂಗ ನಾಯ್ಕ ಅವರಿಗೆ ಕೇಂದ್ರ ಸರಕಾರದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಸಮುದಾಯಕ್ಕೆ ನೀಡಿದ ಗೌರವ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಎಸ್.ಟಿ. ಸಮುದಾಯದ ಮೀಸಲಾಯತಿಯನ್ನು ಶೇ.3 ರಿಂದ ಶೇ.7 ಕ್ಕೆ ಹೆಚ್ಚಿಸಿದ್ದು, ಎಸ್.ಟಿ. ಸಮುದಾಯದ ಬಿಪಿಎಲ್ ಕುಟುಂಬಸ್ಥರಿಗೆ 75 ಯುನಿಟ್ ವಿದ್ಯುತ್ ನ್ನು ಉಚಿತವಾಗಿ ನೀಡಿರುವುದು ಹಾಗೂ ಪರಿಶಿಷ್ಟ ಪಂಗಡದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪರಿಶಿಷ್ಟ ಪಂಗಡದ ಸಚಿವಾಲಯ ಸ್ಥಾಪನೆ, ಪರಿಶಿಷ್ಟ ವರ್ಗದವರಿಗೆ ವಾಲ್ಮೀಕಿ ನಿಗಮ ಸ್ಥಾಪನೆ ಮುಂತಾದ ಹಲವಾರು ಯೋಜನೆಗಳನ್ನು ಸರಕಾರ ನೀಡಿದ್ದು, ಈ ಹಿನ್ನಲೆಯಲ್ಲಿ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಅವರು ಅಧ್ಯಕ್ಷತೆ ವಹಿಸಲಿದ್ದು, ಬಿಜೆಪಿಯ ಎಲ್ಲಾ ಶಾಸಕರು, ರಾಜ್ಯದ ಪ್ರಮುಖ ನಾಯಕರು ಸೇರಿದಂತೆ ದ.ಕ.ಜಿಲ್ಲೆಯಿಂದ ಸುಮಾರು ಐದು ಸಾವಿರಕ್ಕೂ ಅಧಿಕ ಎಸ್.ಟಿ. ಮೋರ್ಚಾ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾದ ಅಧ್ಯಕ್ಷ ಚೆನ್ನಕೇಶವ ಅರಸಮಜಲು, ಕಾರ್ಯದರ್ಶಿಗಳಾದ ಲೋಕೇಶ್ ಎರ್ಮೆನಾಡು, ಹರೀಶ್ ಬಿಜತ್ರೆ, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಶಿವಪ್ಪ ನಾಯ್ಕ ಚಾಕೋಟೆ ಉಪಸ್ಥಿತರಿದ್ದರು.
























