ಕೊನೇ ಕ್ಷಣದಲ್ಲಿ ಕಾರ್ಯಕ್ರಮಗಳೆಲ್ಲ ರದ್ದು
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಇಂದಿನ ಅವರ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಮಂಡಿ ನೋವು ತೀವ್ರಗೊಂಡ ಕಾರಣ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ. ಇಂದು ನಿಗದಿಯಾಗಿದ್ದ ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರವಾಸ ರದ್ದಾಗಿದೆ.
ಚಿಕ್ಕಬಳ್ಳಾಪುರದ ಹೊಸೂರು ಗ್ರಾಮಕ್ಕೆ ಇಂದು ಸಿದ್ದರಾಮಯ್ಯ ಭೇಟಿ ನೀಡಬೇಕಿತ್ತು. ಅಲ್ಲಿ ಬಿಗಿ ಭದ್ರತೆ ಸಹಿತ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ದಿಢೀರ್ ಆಗಿ ಸಿದ್ದರಾಮಯ್ಯ ಭೇಟಿ ರದ್ದಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ ಎಂದು ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 500 ಜನ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಬಂದೋಬಸ್ತ್ ಮಾಡಲಾಗಿತ್ತು. ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ನೇತೃತ್ವದಲ್ಲಿ 1 ಎಸ್ಪಿ, 1 ಎಎಸ್ಪಿ, 4 ಡಿ.ವೈ.ಎಸ್ಪಿ, 20 ಸಿ.ಪಿ.ಐ, 2 ಕೆ.ಎಸ್.ಆರ್.ಪಿ ಸೇರಿದಂತೆ 500 ಜನ ಪೊಲೀಸರಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಿಎಂ ಭೇಟಿ ದಿಢೀರಾಗಿ ರದ್ದಾಗಿದೆ.
























