ಇಂದಿನ ಪವಿತ್ರ ಸ್ನಾನ ರದ್ದು; ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ
ಪ್ರಯಾಗ್ರಾಜ್: ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 10ರಿಂದ 15 ಮಂದಿ ಮೃತರಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಆಸ್ಪತ್ರೆಗೆ 15ಕ್ಕೂ ಹೆಚ್ಚು ಮೃತದೇಹಗಳನ್ನು ತರಲಾಗಿದೆ ಎಂದು ವಿದೇಶ ಮಾಧ್ಯಮವೊಂದು ವರದಿ ಮಾಡಿದೆ.
ಇಂದು ಮೌನಿ ಅಮಾವಾಸ್ಯೆಯ ಪವಿತ್ರ ಸ್ನಾನಕ್ಕಾಗಿ ಪ್ರಯಾಗ್ರಾಜ್ನಲ್ಲಿ ಕೋಟಿಗಟ್ಟಲೆ ಜನರು ಸೇರಿದ್ದರು. ಈ ಸಂದರ್ಭದಲ್ಲಿ ತಡೆಬೇಲಿ ಮುರಿದು ಸ್ನಾನಕ್ಕೆ ಧಾವಿಸಿದವರು ಜನರನ್ನು ತುಳಿದುಕೊಂಡು ಹೋದ ಪರಿಣಾಮವಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಇಂದು ಸುಮಾರು 10 ಕೋಟಿ ಜನ ಪ್ರಯಾಗ್ರಾಜ್ನಲ್ಲಿ ಸೇರುವ ನಿರೀಕ್ಷೆಯಿತ್ತು.
ಮುಂಜಾನೆಯ 2.30ರ ವೇಳೆಗೆ ಪವಿತ್ರ ಸ್ನಾನಕ್ಕಾಗಿ ಭಾರಿ ಸಂಖ್ಯೆಯಲ್ಲಿ ಜನರು ಸಂಗಮದತ್ತ ಧಾವಿಸಿದಾಗ ನೂಕುನುಗ್ಗಲು ಸಂಭವಿಸಿತು. ಕೆಲವರು ತಡೆಬೇಲಿಗಳನ್ನು ಹಾರಿಕೊಂಡು ಮಲಗಿದ್ದವರನ್ನು ತುಳಿದುಕೊಂಡು ಹೋದಾಗ ಕಾಲ್ತುಳಿತ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾರೆ. ಗಾಯಗೊಂಡವರನ್ನು ಸೆಕ್ಟರ್ 2ರಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದಾರೆ.
ಪವಿತ್ರ ಸ್ನಾನ ರದ್ದು
ಕಾಲ್ತುಳಿತ ಸಂಭವಿಸಿದ ಬಳಿಕ ಇಂದಿನ ಪವಿತ್ರ ಸ್ನಾನವನ್ನು ರದ್ದುಗೊಳಿಸಲಾಗಿದೆ. ಯಾರೂ ನದಿಯತ್ತ ಹೋಗಬಾರದೆಂದು ಸೂಚನೆ ಹೊರಡಿಸಲಾಗಿದೆ.
ಪ್ರಧಾನಿ ಮೋದಿ ಕಳವಳ
ಮಹಾಕುಂಭಮೇಳದಲ್ಲಿ ಸಂಭವಿಸಿದ ಅವಘಡದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಬಹಳ ಕಳವಳಕ್ಕೀಡಾಗಿದ್ದಾರೆ. ಎರಡೆರಡು ಸಲ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಂಪರ್ಕಸಿ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿರುವ ಮಹಾಕುಂಭಮೇಳದಲ್ಲಿ ಸಂಭವಿಸುವ ಚಿಕ್ಕಪುಟ್ಟ ಅವಘಡ ಕೂಡ ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ಉತ್ತರ ಪ್ರದೇಶ ಸರಕಾರ ಮತ್ತು ಕೇಂದ್ರ ಸರಕಾರ ಕುಂಭಮೇಳಕ್ಕೆ ವ್ಯಾಪಕ ತಯಾರಿ ನಡೆಸಿ ಭಾರಿ ಮುನ್ನೆಚ್ಚರಿಕೆ ವಹಿಸಿತ್ತು. ಅದರ ಹೊರತಾಗಿಯೂ ಅವಘಡ ಸಂಭವಿಸಿದೆ.
ಮೂರನೇ ದುರಂತ
ಮಹಾಕುಂಭಮೇಳದಲ್ಲಿ ಸಂಭವಿಸಿದ ಮೂರನೇ ದುರಂತ ಇದು. ಕೆಲದಿನಗಳ ಹಿಂದೆ ತಂಗಲು ನಿರ್ಮಿಸಿದ ಹುಲ್ಲಿನ ಗುಡಿಸಲುಗಳಿಗೆ ಬೆಂಕಿ ಹತ್ತಿಕೊಂಡು 20ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ದವು. ಇದಾದ ಒಂದು ವಾರದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹತ್ತಿಕೊಂಡು ಮೂರು ಕಾರುಗಳು ಸುಟ್ಟಿದ್ದವು. ಈ ಅವಘಡಗಳ ತನಿಖೆ ನಡೆಯುತ್ತಿರುವಾಗಲೇ ಮೂರನೇ ಅವಘಡ ಸಂಭವಿಸಿದೆ.