ಶಾರೂಕ್ ಮನೆ ಬಳಿ ಹಲವು ಬಾರಿ ಸುಳಿದಾಡಿದ್ದ ಆರೋಪಿ
ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಇದಕ್ಕೂ ಮೊದಲು ಸೂಪರ್ ಸ್ಟಾರ್ ಶಾರೂಕ್ ಖಾನ್ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂಬ ವಿಚಾರ ಬಹಿರಂಗವಾಗಿದ್ದು, ಹೀಗಾಗಿ ಇದು ಹಣಕ್ಕಾಗಿ ಮಾಡಿದ ದರೋಡೆ ಕೃತ್ಯ ಅಲ್ಲ ಎನ್ನಲಾಗಿದೆ.
ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡುವ ಮುಂಚೆ ಶಾರುಖ್ ಮನೆಯ ಮುಂದೆ ಕೂಡ ಹಲವು ಬಾರಿ ಈ ಆರೋಪಿ ಕಾಣಿಸಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಜ.14ರಂದು ಶಾರುಖ್ ದಾಳಿಗೂ ಆರೋಪಿ ಸ್ಕೆಚ್ ಹಾಕಿದ್ದ ಎಂಬ ವಿಚಾರ ಬೆಳಕಿಗೆ ಬಂದಿದ್ದು, ನಟನ ನಿವಾಸದ ಬಳಿ 6-8 ಅಡಿಯ ಕಬ್ಬಿಣದ ಏಣಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಶಾರುಖ್ ಅವರ ಮನ್ನತ್ ನಿವಾಸಕ್ಕೆ ಭೇಟಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಮುಂಬಯಿ ಪೊಲೀಸರು ಬಹಿರಂಗಪಡಿಸಿದ್ದರು. ಟೀ-ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿರುವ ಶಂಕಿತ, ಬ್ಯಾಗ್ವೊಂದನ್ನ ಹಾಕಿಕೊಂಡಿದ್ದು, ಕಿತ್ತಳೆ ಬಣ್ಣದ ಸ್ಕಾಫ್ ಧರಿಸಿದ್ದಾನೆ. ಮೆಟ್ಟಿಲುಗಳಿಂದ ಇಳಿದು ಹೋಗುತ್ತಿರುವಾಗ ಸಿಟಿಟಿವಿ ಕ್ಯಾಮೆರಾ ನೋಡಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ.ಇದರ ಆಧಾರದಲಿ ಇಂದು ಅವನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ.
ಸೈಫ್ ಅಲಿಖಾನ್ ಮನೆಯ ಕೆಲಸದಾಳು ಎಲಿಯಾಮಾ ಫಿಲಿಪ್ಸ್ ಅಲಿಯಾಸ್ ಲಿಮಾ ಆರೋಪಿಯನ್ನು ಮೊದಲು ನೋಡಿದವರು. ಅವರು ಭಯದಲ್ಲಿ ಜೋರಾಗಿ ಕಿರುಚಿದ್ದಾರೆ. ಆಗ ಎಚ್ಚರಗೊಂಡ ಸೈಫ್ ದುಷ್ಕರ್ಮಿ ಒಳ ನುಗ್ಗದಂತೆ ತಡೆಯಲು ಹೋರಾಡಿದ್ದಾರೆ. ಈ ವೇಳೆ ಹಂತಕ 6 ಬಾರಿ ಇರಿದು, ಎಡಗೈ ಮತ್ತು ಗುತ್ತಿಗೆ ಭಾಗವನ್ನ ಗಾಯಗೊಳಿಸಿದ್ದಾನೆ. ಹಂತಕ ಒಳ ನುಗ್ಗಲು ಪ್ರಯತ್ನಿಸಿದಾಗ ನಿನಗೇನು ಬೇಕು ಎಂದು ಕೇಳಲಾಗಿತ್ತಂತೆ. ಆಗ 1 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ಇಬ್ಬರು ಮನೆಯ ಸಹಾಯಕರೂ ಗಾಯಗೊಂಡಿದ್ದಾರೆ.