ಉಡುಪಿ: ಗಾಂಧೀಜಿಯನ್ನು ಟೀಕಿಸಿದ ಹಿಂದೂ ಕಾರ್ಯಕರ್ತೆಯ ವಿರುದ್ಧ ಕೇಸ್‌

ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಗಾಂಧೀಜಿ ಬಗ್ಗೆ ಕಮೆಂಟ್‌ ಮಾಡಿದ್ದ ಮೀನಾಕ್ಷಿ ಸೆಹ್ರಾವತ್‌

ಉಡುಪಿ: ಕೆಲವು ದಿನಗಳ ಹಿಂದೆ ಉಡುಪಿಯಲ್ಲಿ ಗಾಂಧೀಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಡೆಹ್ರಾಡೂನ್‌ನ ವಾಗ್ಮಿ ಮೀನಾಕ್ಷಿ ಸೆಹ್ರಾವತ್‌ ಎಂಬವರ ವಿರುದ್ಧ ಕೇಸ್‌ ದಾಖಲಾಗಿದೆ. ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಡೆಹ್ರಾಡೂನ್‌ನ ಚಿಂತಕಿ ಮೀನಾಕ್ಷಿ ಬಾಂಗ್ಲಾ ಪಾಠ ಎಂಬ ವಿಷಯದ ಬಗ್ಗೆ ಹಿಂದಿಯಲ್ಲಿ ಮಾತನಾಡಿ, ಜಿನ್ನಾ ಜೊತೆ ಸೇರಿಕೊಂಡು ಮಹಾತ್ಮ ಗಾಂಧಿ ಪಾಕಿಸ್ಥಾನಕ್ಕೆ ಜನ್ಮ ನೀಡಿದ್ದಾರೆ. ಗಾಂಧೀಜಿ ಹಿಂದೂಗಳನ್ನು ದುರ್ಬಲಗೊಳಿಸಲು ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ. ಅವರನ್ನು ನಾವು ರಾಷ್ಟ್ರಪಿತ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಧರ್ಮಗಳ, ಗುಂಪುಗಳ ನಡುವೆ ವೈಮನಸ್ಸು, ದ್ವೇಷ, ಸಮಾಜದಲ್ಲಿ ಅಶಾಂತಿ ಹರಡುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಉಡುಪಿಯ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿದೆ.
ತನ್ನ ವಿರುದ್ಧ ಉಡುಪಿಯಲ್ಲಿ ಕೇಸ್‌ ದಾಖಲಾಗಿರುವುದನ್ನು ಮೀನಾಕ್ಷಿ ಸೆಹ್ರಾವತ್ ನಿನ್ನೆ ಎಕ್ಸ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಟ್ವೀಟ್‌ ಮಾಡಿ ಕರ್ನಾಟಕ ಪೊಲೀಸರು ತನ್ನ ವಿರುದ್ಧ ವಿನಾಕಾರಣ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪಿತ ಎಂದು ಕರೆಯಲ್ಪಡುವ ಗಾಂಧೀಜಿ ಬಗ್ಗೆ ನಾನು ಕೆಲವು ಕಮೆಂಟ್‌ಗಳನ್ನು ಮಾಡಿದ್ದರಿಂದ ನನ್ನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಐತಿಹಾಸಿಕ ಸತ್ಯ ಸಂಗತಿಗಳನ್ನು ನನ್ನ ಭಾಷಣದಲ್ಲಿ ಹೇಳಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮೀನಾಕ್ಷಿ ಸೆಹ್ರಾವತ್ ಆರೋಪಿಸಿದ್ದಾರೆ.

ನಾನು ಗಾಂಧೀಜಿ ಬಗ್ಗೆ ಮಾತನಾಡಿದ್ದಕ್ಕೆ ಕೇಸ್ ದಾಖಲಿಸಿದ್ದಾರೆ. ಆದರೆ, ವೀರ ಸಾವರ್ಕರ್, ಭಗತ್ ಸಿಂಗ್, ಭಗವಾನ್ ಶ್ರೀಕೃಷ್ಣ ಮತ್ತು ಶ್ರೀರಾಮನಂತಹ ಹಿಂದೂ ಹೋರಾಟಗಾರರು ಮತ್ತು ಹಿಂದೂ ದೇವರುಗಳನ್ನು ನಿಂದಿಸುವವರ ವಿರುದ್ಧ ಎಂದಿಗೂ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ. ಕರ್ನಾಟಕದಲ್ಲಿ ನನಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಪ್ರಶ್ನೆಗಳನ್ನು ಕೇಳುವ ಸ್ವಾತಂತ್ರ್ಯವಿಲ್ಲ ಎಂದು ಅನಿಸುತ್ತದೆ ಎಂದು ಮೀನಾಕ್ಷಿ ಸೆಹ್ರಾವತ್ ಟೀಕಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top