ಕೊಪ್ಪದ ಕಾಡಿನಲ್ಲಿ ಎಕೆ 47 ಬಂದೂಕು ಸಹಿತ ಶಸ್ತ್ರಾಸ್ತ್ರ ಪತ್ತೆ

ನಕ್ಸಲರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ಎಂಬ ಅನುಮಾನ

ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಜಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಕಿತ್ತಲೆಗಂಡಿ ಕಾಡಿನಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇವುಗಳು ಇತ್ತೀಚೆಗೆ ಶರಣಾಗಿರುವ ನಕ್ಸಲರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ಎನ್ನಲಾಗಿದೆ. ಆದರೆ ಪೊಲೀಸರು ಇದನ್ನು ಇನ್ನೂ ದೃಢಪಡಿಸಿಲ್ಲ. ಮೇಲ್ನೋಟಕ್ಕೆ ನಕ್ಸಲರದ್ದೇ ಎಂದು ಹೇಳಲಾಗುತ್ತಿದ್ದರೂ ಇನ್ನೂ ಖಚಿತವಾಗಿಲ್ಲ. ತನಿಖೆಯಿಂದ ಗೊತ್ತಾಗಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ಎಕೆ-47, ಐದು 303 ಕೋವಿ , ಒಂದು ಪಿಸ್ತೂಲ್, 100ಕ್ಕೂ ಹೆಚ್ಚು ಗುಂಡುಗಳು ಮೇಗೂರು ಅರಣ್ಯ ವ್ಯಾಪ್ತಿಯ ಕಿತ್ತಲೆಗಂಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ. ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಅಪರಿಚಿತರ ಆಯುಧಗಳು ಎಂದು ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು. ಕೆಲವರು ಅರಣ್ಯದ ರಹಸ್ಯ ಸ್ಥಳದಲ್ಲಿ ಅಡಗಿಸಿ ಇಟ್ಟಿರುವುದಾಗಿ ತಿಳಿದುಬಂದಿತ್ತು. ಈ ಸ್ಥಳಗಳ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಹೀಗಾಗಿ ಪೊಲೀಸರು ಬಾಡಿ ವಾರಂಟ್‌ ಪಡೆದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಇದೀಗ ಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇದು ನಕ್ಸಲರು ಪದೇಪದೆ ಓಡಾಡಿಕೊಂಡಿದ್ದ ಸ್ಥಳವಾಗಿರುವುದರಿಂದ ಶಸ್ತ್ರಾಸ್ತ್ರಗಳು ನಕ್ಸಲರದ್ದೇ ಎನ್ನಲಾಗಿದೆ. ಪೊಲೀಸರು ಅಧಿಕೃತವಾಗಿ ಹೇಳುವುದಷ್ಟೇ ಬಾಕಿ ಉಳಿದಿದೆ.































 
 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಎದುರು ಬುಧವಾರ ರಾತ್ರಿ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್‌. ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಶರಣಾಗಿದ್ದು, ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಡಿವೈಎಸ್‌ಪಿ ಬಾಲಾಜಿ ಸಿಂಗ್ ಅವರ ನೇತ್ವತ್ವದಲ್ಲಿ ಗುರುವಾರ ನಗರದದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರು ಮಂದಿಯನ್ನು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಂತರ ಪೊಲೀಸರು 6 ಮಂದಿ ನಕ್ಸಲರನ್ನು ಬಿಗಿ ಭದ್ರತೆ ನಡುವೆ ಗುರುವಾರ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಟ್ಟಿದ್ದಾರೆ.
ಆರು ಮಂದಿ ನಕ್ಸಲರ ವಿರುದ್ಧವೂ ‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ’(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top