ನೆಲ್ಯಾಡಿ: ಹೆಜ್ಜೇನು ದಾಳಿ ನಡೆಸಿ ಇಬ್ಬರು ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ಬೆಳಿಗ್ಗೆ ನೆಲ್ಯಾಡಿ ಗ್ರಾಮದ ಮಾದೇರಿ ಸಮೀಪದ ತುಂಬೆತ್ತಡ್ಕ ಎಂಬಲ್ಲಿ ನಡೆದಿದೆ.
ಗಾಯಗೊಂಡವರು ಮಾದೇರಿ ತುಂಬೆತ್ತಡ್ಕ ನಿವಾಸಿ ರೂಪಾವತಿ(30) ಹಾಗೂ ತಿಮ್ಮಪ್ಪ ಕುಂಬಾರ(49) ಎನ್ನಲಾಗಿದೆ.
ರೂಪಾವತಿ ಎಂಬವರಿಗೆ ಮನೆ ಸಮೀಪವೇ ಏಕಾಏಕಿ ಹೆಜ್ಜೇನುಗಳು ದಾಳಿ ಮಾಡಿವೆ. ಇದರಿಂದ ವಿಚಲಿತಗೊಂಡ ರೂಪಾವತಿ ಜೋರಾಗಿ ಕಿರುಚಿದ್ದಾರೆ. ರೂಪಾವತಿಯವರ ಬೊಬ್ಬೆ ಕೇಳಿ ಪಕ್ಕದ ಮನೆಯ ತಿಮ್ಮಪ್ಪ ಕುಂಬಾರ ಎನ್ನುವವರು ರಕ್ಷಣೆಗಾಗಿ ಗೋಣಿ ಚೀಲ ಹಿಡಿದು ಬಂದಿದ್ದರು. ಈ ವೇಳೆ ಹೆಜ್ಜೇನುಗಳು ತಿಮ್ಮಪ್ಪ ಕುಂಬಾರರಿಗೂ ದಾಳಿ ಮಾಡಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಇವರನ್ನು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಅಲ್ಲೇ ಸಮೀಪದ ಮನೆಯ ಉಪೇಂದ್ರ ಎಂಬವರ ಕೊಟ್ಟಿಗೆಯಲ್ಲಿದ್ದ ಗಬ್ಬದ ಹಸುವಿನ ಮೇಲೂ ಹೆಜ್ಜೇನು ದಾಳಿ ನಡೆಸಿದ್ದು ಹಸು ಸಹ ತೀವ್ರ ಅಸ್ವಸ್ಥಗೊಂಡಿದೆ ಎಂದು ವರದಿಯಾಗಿದೆ.