ನಕ್ಸಲರ ಶರಣಾಗತಿ ಪ್ರಹಸನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶಾಸಕ
ಕಾರ್ಕಳ : ಶರಣಾಗುವ ಆರು ಮಂದಿ ನಕ್ಸಲರಿಗೆ ಸರಕಾರ ಪರಿಹಾರದ ಪ್ಯಾಕೇಜ್ ನೀಡುತ್ತಿರುವುದಕ್ಕೆ ಕಾರ್ಕಳ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು ಯಾವ ಮಾನದಂಡದ ಮೇಲೆ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.
ಆರು ಮಂದಿ ನಕ್ಸಲರಿಗೆ ರಾಜ್ಯ ಸರಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ನಕ್ಸಲರಿಗೆ, ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ, ಸೌಕರ್ಯ ಎಲ್ಲವೂ ಸಿಗುತ್ತದೆ.
ರಾಷ್ಟ್ರಕವಿ ಕುವೆಂಪು ಕರ್ಮಭೂಮಿಯೂ ಆಗಿದ್ದ ತಣ್ಣಗಿನ ಮಲೆನಾಡು ಭಾಗದಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ಕೊಡುತ್ತೀರಾ ಸಿದ್ದರಾಮಯ್ಯನವರೇ? ಇದರಿಂದ ಪೊಲೀಸರ ಆತ್ಮಸ್ಥೈರ್ಯ ಏನಾಗಬೇಡ? ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ ಎಂದು ಸುನಿಲ್ ಕುಮಾರ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.