ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸರಕಾರದಿಂದ ಗ್ಯಾರಂಟಿ ವಾಪಸ್‌ ಪಡೆಯುವ ಅಭಿಯಾನ

ಉಚಿತ ವಿದ್ಯುತ್‌ ಗ್ಯಾರಂಟಿ ಕೈ ಬಿಡುವಂತೆ ಜನರಿಗೆ ಮನವಿ

ಶಿಮ್ಲಾ: ಕರ್ನಾಟಕದಂತೆ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಸರಕಾರ ಈಗ ದಿವಾಳಿಯಂಚಿಗೆ ತಲುಪಿದ್ದು, ಆರ್ಥಿಕ ಸ್ಥಿತಿಯ ಚೇತರಿಕೆಗಾಗಿ ಗ್ಯಾರಂಟಿಗಳನ್ನು ಹಿಂದೆಗೆದುಕೊಳ್ಳಲು ಪ್ರಾರಂಭಿಸಿದೆ. ಮೊದಲ ಹಂತವಾಗಿ ರಾಜ್ಯದಲ್ಲಿ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಶುರುವಾಗಿದೆ. ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಸ್ವತಃ ತನ್ನ ಐದು ವಿದ್ಯುತ್‌ ಸಂಪರ್ಕಗಳ ಸಬ್ಸಿಡಿಯನ್ನು ವಾಪಸು ನೀಡಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಹಣ ಉಳಿಸುವ ಕ್ರಮಕ್ಕೆ ಸರಕಾರ ಮುಂದಾಗಿದ್ದು, ವಿದ್ಯುತ್ ಸಬ್ಸಿಡಿಯನ್ನು ತ್ಯಜಿಸುವಂತೆ ಜನರಿಗೆ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ. ಸುಖ್ವೀಂದರ್ ಸಿಂಗ್ ಸುಖು ಅವರು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ ವಿದ್ಯುತ್ ಸಬ್ಸಿಡಿ ವಾಪಸ್ ನೀಡಿದ್ದಾರೆ. ಅಲ್ಲದೆ ಇತರ ಅರ್ಹರಿಗೂ ಸಬ್ಸಿಡಿ ಯೋಜನೆಯಿಂದ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ 5 ವಿದ್ಯುತ್ ಸಂಪರ್ಕಗಳಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಹಿಂದಿರುಗಿಸಿದ್ದು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಹುವಿದ್ಯುತ್ ಸಂಪರ್ಕವನ್ನು ಹೊಂದಿರುವ ಜನರು, ಸಬ್ಸಿಡಿಯನ್ನು ವಾಪಸ್ ನೀಡುವಂತೆ ಕೋರಿದ್ದಾರೆ.































 
 

ಸರ್ಕಾರ ವಿದ್ಯುತ್ ಸಬ್ಸಿಡಿಗಾಗಿ ವಾರ್ಷಿಕ 2,200 ಕೋಟಿ ರೂ. ಖರ್ಚು ಮಾಡುತ್ತದೆ. ವಿದ್ಯುತ್ ಇಲಾಖೆಯ ನೌಕರರ ಸಂಬಳ ಮತ್ತು ಪಿಂಚಣಿಗಾಗಿ ತಿಂಗಳಿಗೆ 200 ಕೋಟಿ ರೂ. ಖರ್ಚು ಮಾಡುತ್ತಿದೆ. ಸಬ್ಸಿಡಿ ಅಗತ್ಯ ಇರುವವರಿಗೆ ಮೀಸಲು, ಅನುಕೂಲಸ್ಥರು ರಾಜ್ಯದ ಅಭಿವೃದ್ಧಿ ಕಾರಣಕ್ಕೆ ವಾಪಸ್ ನೀಡಬೇಕು ಎಂದಿದ್ದಾರೆ.

ಇದಕ್ಕೂ ಮುನ್ನ ಸರಕಾರ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯದಲ್ಲಿ ಹಲವು ವೆಚ್ಚಗಳಿಗೆ ಕಡಿವಾಣ ಹಾಕಿತ್ತು. ಸಿಎಂ, ಪಕ್ಷದ ಶಾಸಕರು, ಉನ್ನತ ಅಧಿಕಾರಿಗಳ ವೇತನ ಪಾವತಿಯಲ್ಲಿ ವಿಳಂಬವಾಗಿತ್ತು. ಕೆಲ ಸರ್ಕಾರಿ ಹೋಟೆಲ್‌ಗಳನ್ನು ಕೂಡ ಮಾರಾಟ ಮಾಡಲಾಗಿತ್ತು. ಅನರ್ಹ ಶಾಸಕರಿಗೆ ಪಿಂಚಣಿ ನಿಲ್ಲಿಸುವ ನಿರ್ಧಾರ ಪ್ರಕಟಿಸಿತ್ತು. ಉದ್ಯಮ, ಹೋಟೆಲ್‌ಗಳಿಗೆ ನೀಡುವ ವಿದ್ಯುತ್ ಸಬ್ಸಿಡಿ ಕಡಿತ ಮಾಡಲಾಗಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top