ಪುತ್ತೂರು : ಪುತ್ತೂರಿನ ಹೈಸ್ಕೂಲ್ ನಲ್ಲಿ ವ್ಯಾಸಂಗ ಪಡೆಯುತ್ತಿದ್ದ ವಿದ್ಯಾರ್ಥಿನಿ ನೋವಿನ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವಿದ್ಯಾರ್ಥಿನಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾಳೆಂದು ತಿಳಿದು ಬಂದಿದೆ.
ಶಾಲಾ ಶಿಕ್ಷಕರ ಕಿರುಕುಳದಿಂದ ವಿದ್ಯಾರ್ಥಿನಿ ಮನನೊಂದು ಈ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದಾಗಿ ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಮಗಳು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಕಲ್ಲೇರಿ ಮೂಲದ ಸದ್ಯ ಪಡೀಲುನಲ್ಲಿದ್ದು ಪುತ್ತೂರು ನಗರದಲ್ಲಿರುವ ಸರಕಾರಿ ಪ್ರೌಢ ಶಾಲೆಯೊಂದರಲ್ಲಿ ಓದುತ್ತಿರುವ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದವಳು ಎನ್ನಲಾಗಿದೆ. ಕರಾಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ 10 ನೇ ತರಗತಿಯ ವ್ಯಾಸಂಗಕ್ಕಾಗಿ ಪುತ್ತೂರಿಗೆ ಆಗಮಿಸಿದ್ದಾರೆ.