ಪುತ್ತೂರು: ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯು ಗುಜರಾತ್ ನ ರಾಜಕೋಟ್ ನಲ್ಲಿ ಏಳು ದಿನಗಳ ಕಾಲ ನಡೆಸಿದ 68ನೇ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪ್ರತೀಕ್ಷಾ ಶೆಣೈ ಅವರನ್ನು ಸಂಸ್ಥೆಯ ವತಿಯಿಂದ ಗುರುವಾರ ಅಭಿನಂದಿಸಿ ಸನ್ಮಾನಿಸಲಾಯಿತು.
ಪುತ್ತೂರಿನ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮೀ ಎನ್. ಶೆಣೈಯವರ ಪುತ್ರಿಯಾದ ಅವರು ರಾಜ್ಕೋಟ್ ನ ಸರ್ದಾರ್ ವಲ್ಲಭಬಾಯಿ ಪಟೇಲ್ ಈಜುಕೊಳದಲ್ಲಿ ನಡೆದ ಸ್ಪರ್ಧೆಯಲ್ಲಿ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಕೇಂದ್ರ ಸರ್ಕಾರ ಆಯೋಜಿಸಿದ ಈ ಸ್ಪರ್ಧೆಯಲ್ಲಿ ದೇಶದೆಲ್ಲೆಡೆಯಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಈಜುಪಟುಗಳು ಭಾಗವಹಿಸಿದ್ದರು. ಇದಲ್ಲದೆ ಪ್ರತೀಕ್ಷಾ ಶೆಣೈ ಕರ್ನಾಟಕ ಸ್ವಿಮ್ಮಿಂಗ್ ಪೂಲ್ (ಕೆಎಸ್ಎ), ಬೆಂಗಳೂರು ಬಸವನಗುಡಿಯ ಈಜುಕೊಳದಲ್ಲಿ ಆಯೋಜಿಸಿದ ಸ್ಪರ್ಧೆಯ 50 ಮೀ, 100 ಮೀ ಮತ್ತು 200 ಮೀ. ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಕ್ರಮವಾಗಿ 2 ಚಿನ್ನ, 1 ಕಂಚು ಪದಕ ಗೆದ್ದು ಸಾಧನೆ ಮೆರೆದಿದ್ದಾರೆ. ಅಲ್ಲದೇ 35.88 ಸೆಂಕೆಡ್ ಅವಧಿಯಲ್ಲಿ ಈಜಿ 10 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ವಿಕ್ರಮ ಸಾಧಿಸಿದ್ದಾರೆ.
ಈ ಎಲ್ಲ ಸಾಧನೆಗಾಗಿ ಪ್ರತೀಕ್ಷಾ ಶೆಣೈ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಸನ್ಮಾನಿಸಿದರು. ಉಪಪ್ರಿನ್ಸಿಪಾಲ್ ಶೈನಿ ಕೆ ಜೆ, ಉಪನ್ಯಾಸಕ ಯತೀಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರದೀಪ್ ಕೆ ವೈ ವಿಶ್ಲೇಷಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.