ಬೆನ್ನಟ್ಟಿದ ಟ್ರಾಫಿಕ್ ಪೊಲೀಸ್ ಬಸ್ ಏರಿ ಪಲಾಯನ
ಮಂಗಳೂರು: ಹೆಲ್ಮೆಟ್ ಧರಿಸದ ಕಾರಣಕ್ಕೆ ಪೊಲೀಸರು ಬೆನ್ನುಹತ್ತಿದಾಗ ತಪ್ಪಿಸಿಕೊಳ್ಳಲು ವೇಗವಾಗಿ ವಾಹನ ಚಲಾಯಿಸಿದ ಸ್ಕೂಟರ್ ಸವಾರ ಬಸ್ಸಿನಡಿಗೆ ಬಿದ್ದು ಸಾವಿಗೀಡಾದ ಘಟನೆ ನಿನ್ನೆ ರಾತ್ರಿ ಸುರತ್ಕಲ್ನಲ್ಲಿ ಸಂಭವಿಸಿದೆ. ಸುರತ್ಕಲ್ನ ಕಾನ ಕುಳಾಯಿ ಗುಡ್ಡೆ ಜಂಕ್ಷನ್ನಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಮೃತರನ್ನು ಕಾನ ನಿವಾಸಿ ರೆಮ್ಮಿ (38) ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದಾಗ ರಕ್ಷಣೆಗೆ ಧಾವಿಸಬೇಕಾದ ಪೊಲೀಸರು ಬಸ್ ಹತ್ತಿ ಪಲಾಯನ ಮಾಡಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ದ್ವಿಚಕ್ರ ವಾಹನಕ್ಕೆ ಬಸ್ ಗುದ್ದಿದಾಗ ವಾಹನ ಬೆನ್ನಟ್ಟಿದ್ದ ಪೊಲೀಸ್ ಸಿಬ್ಬಂದಿ ಬಸ್ ಹತ್ತಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಕುಳಾಯಿಗೆ ಟ್ಯೂಷನ್ಗೆ ತೆರಳಿದ್ದ ಮಗಳನ್ನು ಕರೆತರಲೆಂದು ರೆಮ್ಮಿ ಸ್ಕೂಟರ್ನಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದರೆನ್ನಲಾಗಿದೆ. ಕುಳಾಯಿಗುಡ್ಡೆ ಜಂಕ್ಷನ್ ಬಳಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ರೆಮ್ಮಿಯನ್ನು ಬೆನ್ನಟ್ಟಿ ಹಿಡಿಯಲು ಮುಂದಾಗಿದ್ದಾರೆ.
ಇದನ್ನು ಗಮನಿಸಿದ ರೆಮ್ಮಿ ಸುರತ್ಕಲ್ ಕಡೆಗೆ ತನ್ನ ದ್ವಿಚಕ್ರ ವಾಹನವನ್ನು ತಿರುಗಿಸಿ ಚಲಾಯಿಸಿದಾಗ ಎದುರಿನಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ರೆಮ್ಮಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ. ಅಪಘಾತ ನಡೆದ ಬೆನ್ನಲ್ಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಅಪಘಾತಕ್ಕೆ ಪೊಲೀಸರ ಅನಾಗರಿಕ ವರ್ತನೆಯೇ ಕಾರಣ. ತಪ್ಪಿತಸ್ಥ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಸಾರ್ವಜನಿಕರು ಸುರತ್ಕಲ್- ಕಾನ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.