ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿ ಬೆಡ್ರೂಮ್ನಿಂದಲೇ ಎತ್ತಾಕಿಕೊಂಡು ಹೋದ ಪೊಲೀಸರು
ಹೈದರಾಬಾದ್ : ಪುಷ್ಪ-2 ಸಿನೆಮಾದ ಪ್ರಿಂಇಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದ ಹೀರೊ ಅಲ್ಲು ಅರ್ಜುನ್ ಅವರನ್ನು ತೆಲಂಗಾಣದ ಚೀಕಟಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ‘ಪುಷ್ಪ 2’ ಸಿನಿಮಾ ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಂಭವಿಸಿದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿ ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿತ್ತು. ಈಗ ನಟ ಅಲ್ಲು ಅರ್ಜುನ್ ಹಾಗೂ ಅವರ ಬಾಡಿಗಾರ್ಡ್ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಕುರಿತು ಈ ಮೊದಲೇ ಹೈದರಾಬಾದ್, ಚೀಕಟಪಲ್ಲಿ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ನೋಟಿಸ್ಗೆ ಅಲ್ಲು ಅರ್ಜುನ್ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಅಲ್ಲು ಅರ್ಜುನ್ ಪ್ರಕರಣ ರದ್ದುಮಾಡುವಂತೆ ಆಗ್ರಹಿಸಿ ತೆಲಂಗಾಣ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇನ್ನೂ ನಡೆದಿಲ್ಲ.
ಈ ಪ್ರಕರಣದಲ್ಲಿ ಸಂಧ್ಯಾ ಚಿತ್ರಮಂದಿರದ ಮಾಲೀಕ, ಚಿತ್ರಮಂದಿರದ ಮ್ಯಾನೇಜರ್ ಹಾಗೂ ಕಾಲ್ತುಳಿತ ನಡೆದ ದಿನ ಅಲ್ಲು ಅರ್ಜುನ್ ಜೊತೆಗೆ ಇದ್ದ ಕೆಲವು ಬೌನ್ಸರ್ಗಳನ್ನು ಈಗಾಗಲೇ ಬಂಧಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ 105, 118 (5) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಅಲ್ಲು ಅರ್ಜುನ್ ಮನೆಯ ಬೆಡ್ರೂಂನಿಂದಲೇ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಕರೆತಂದಿದ್ದಾರೆ. ಅಲ್ಲು ಅರ್ಜುನ್ ಪೊಲೀಸ್ ಜೀಪು ಹತ್ತುವ ಮುಂಚೆ ತಮ್ಮನ್ನು ಬಂಧಿಸಿದ ವಿಧಾನದ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲು ಅರ್ಜುನ್ ಜತೆ ಅವರ ತಂದೆ ಅಲ್ಲು ಅರವಿಂದ್ ಸಹ ಪೊಲೀಸ್ ಜೀಪು ಹತ್ತಿದ್ದರು, ಆದರೆ ಪೊಲೀಸರು ಅವರನ್ನು ಕೆಳಗೆ ಇಳಿಸಿ, ಕೇವಲ ಅಲ್ಲು ಅರ್ಜುನ್ ಅನ್ನು ಮಾತ್ರವೇ ಬಂಧಿಸಿ ಕರೆದೊಯ್ದಿದ್ದಾರೆ.