ಲಿಂಗ ತಟಸ್ಥ ಕಾನೂನು ರಚನೆಗೆ ಆಗ್ರಹ
ಬೆಂಗಳೂರು: ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಅತುಲ್ ಸುಭಾಶ್ ಆತ್ಮಹತ್ಯೆ ಪ್ರಕರಣ ದೇಶವ್ಯಾಪಿ ಹೆಂಡತಿಯಿರಿಂದ ಗಂಡಂದಿರ ಮೇಲಾಗುತ್ತಿರುವ ಶೋಷಣೆಯ ಕುರಿತು ಚರ್ಚೆ ಹುಟ್ಟು ಹಾಕಿದೆ. ಕೌಟುಂಬಿಕ ಕಾನೂನುಗಳನ್ನು ಬಳಸಿ ಪುರುಷರ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೀವನಾಂಶದ ರೂಪದಲ್ಲಿ ಹಣ ಸುಲಿಯುವ ಕುರಿತು ಚರ್ಚೆ ನಡೆಯುತ್ತಿದೆ. ಅಂತೆಯೇ ದೇಶದ ಕಾನೂನುಗಳು ಹೇಗೆ ಮಹಿಳಾ ಪಕ್ಷಪಾತಿಗಳಾಗಿವೆ ಎಂಬುದರ ಮೇಲೆ ಬೆಳಕು ಚೆಲ್ಲಿದೆ. ಅತುಲ್ ಸುಭಾಶ್ ಪ್ರಕರಣ ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿನ ತನಕ ತಲುಪಿದ್ದು, ಕಾನೂನುಗಳ ದುರುಪಯೋಗದ ಬಗ್ಗೆ ವ್ಯಾಪಕ ಕಳವಳ ಉಂಟಾಗಿದೆ.
ಬೆಂಗಳೂರಿನ ಮಾರತಹಳ್ಳಿಯಲ್ಲಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನಡಿ ಅತುಲ್ ಮಡದಿ ನಿಕಿತಾ ಸಿಂಘಾನಿಯ, ನಿಶಾ ಸಿಂಘಾನಿಯಾ, ಅನುರಾಗ್ ಸಿಂಘಾನಿಯಾ ಹಾಗೂ ಸುಶೀಲ್ ಸಿಂಘಾನಿಯಾ ವಿರುದ್ಧ ಮಾರತಹಳ್ಳಿಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತುಲ್ ಸುಭಾಷ್ ಮತ್ತು ನಿಕಿತಾ ಸಿಂಘಾನಿಯ 2019ರಲ್ಲಿ ಮದುವೆಯಾಗಿದ್ದು ಗಂಡು ಮಗು ಇದೆ. ನಿಕಿತಾ ಸಿಂಘಾನಿಯಾ, ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಸಂಬಂಧಿ ಸುಶೀಲ್ ಸಿಂಘಾನಿಯಾ ಸೇರಿ ಅತುಲ್ ಮೇಲೆ ಸುಳ್ಳು ಕೇಸ್ ಹಾಕಿ ನಿರಂತರವಾಗಿ ಕಾಟಕೊಟ್ಟಿದ್ದಾರೆ. ಅತುಲ್ ಗಳಿಕೆ ಸಾಮರ್ಥ್ಯಕ್ಕೂ ಹೆಚ್ಚಿನ ಮೊತ್ತವನ್ನು ಜೀವನಾಂಶವಾಗಿ ಕೇಳಿದ್ದಾರೆ. ಪ್ರಕರಣದ ಇತ್ಯರ್ಥಕ್ಕಾಗಿ 3 ಕೋಟಿ ರೂ. ನೀಡಬೇಕೆಂದು ದಾವೆ ಹೂಡಿದ್ದರು. ಅಷ್ಟೇ ಅಲ್ಲದೇ ಮಗನ ಭೇಟಿಗೆ ಅವಕಾಶ ನೀಡಲು 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. 3 ಕೋಟಿ ನೀಡದಿದ್ದರೆ ನೀನು ಬದುಕಬೇಡ. ಆತ್ಮಹತ್ಯೆ ಮಾಡಿಕೋ ಎಂದು ಅಣಕಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ನೊಂದು ನನ್ನ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಕಾಸ್ ಕುಮಾರ್ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಓರ್ವ ನ್ಯಾಯಾಧೀಶರ ಹೆಸರು ಕೂಡ ಉಲ್ಲೇಖಕ್ಕೆ ಬಂದಿದ್ದು, ಅವರು ಪ್ರಕರಣ ಇತ್ಯರ್ಥಪಡಿಸಲು 5 ಲ. ರೂ. ಕೇಳಿದ್ದಾರೆ ಎಂಬ ಆರೋಪವಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಕೌಟುಂಬಿಕ ಹಿಂಸಾಚಾರ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಕಾನೂನುಗಳ ದುರುಪಯೋಗ ಕುರಿತು ಕಾನೂನು ತಜ್ಞರು ಗಂಭೀರ ಕಳವಳ ವ್ಯಕ್ತಪಡಿಸಿದ್ದು, ಸುಳ್ಳು ಪ್ರಕರಣಗಳನ್ನು ದಾಖಲಿಸುವುದನ್ನು ತಡೆಯಲು ಪೊಲೀಸರು ಹೆಚ್ಚು ಸಂವೇದನಾಶೀಲರಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 24 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಇದರಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ ವರ್ಷಗಳ ಕಾಲ ಅನುಭವಿಸಿದ ಭಾವನಾತ್ಮಕ ಯಾತನೆ ಬಗ್ಗೆ ವಿವರಿಸಿದ್ದಾರೆ. ಈ ಡೆತ್‌ನೋಟ್‌ನಿಂದಾಗಿಯೇ ಪುರುಷ ಶೋಷಣೆಯ ಕರಾಳ ಮುಖವೊಂದು ಅನಾವರಣಗೊಂಡಿದೆ. ಜೊತೆಗೆ ಇಂಥ ಪ್ರಕರಣಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಲೋಪವೂ ಬಯಲಿಗೆ ಬಂದಿದೆ.
ಕಾನೂನು ತಜ್ಞರು ಇದನ್ನು ಅತ್ಯಂತ ಅತ್ಯಂತ ಗಂಭೀರ ಸಮಸ್ಯೆ ಎಂದು ವಿಶ್ಲೇಷಿಸಿದ್ದು, ಸೂಕ್ತವಾದ ಪರಿಹಾರದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಹಲವಾರು ವರ್ಷಗಳಿಂದ ಈ ಕಾನೂನುಗಳನ್ನು ಅನೇಕ ಜನರು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಇದು ತುಂಬಾ ಗಂಭೀರವಾದ ವಿಷಯವಾಗಿದೆ ಮತ್ತು ನಾವು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವಂತ ಹೆಂಡತಿ, ಅತ್ತಿಗೆ, ನಾದಿನಿಯರೇ ಗೌರವಕ್ಕೆ ಧಕ್ಕೆಯಾಗಿದೆ ಎಂದು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಇದನ್ನು ನಾವು ಪ್ರತಿದಿನ ನೋಡುತ್ತೇವೆ. ನ್ಯಾಯಾಲಯಗಳು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಬೇಕು. ಪೊಲೀಸರು ಜಾಗೃತರಾಗಬೇಕು. ಅಂತಹ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಅನುಕೂಲ ಮಾಡಿಕೊಡಬಾರದು ಎಂದು ಹೇಳಿದ್ದಾರೆ.
ಕೌಟುಂಬಿಕ ಸಮಸ್ಯೆಗಳ ವಿಚಾರದಲ್ಲಿ ಮಹಿಳೆ ಮತ್ತು ಪುರುಷರನ್ನು ಸಮಾನವಾಗಿ ಕಾಣುವ ಲಿಂಗ ತಟಸ್ಥ ಕಾನೂನುಗಳ ಅವಶ್ಯಕತೆಯಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ಅಶ್ವನಿ ದುಬೆ ಅಭಿಪ್ರಾಯಪಟ್ಟಿದ್ದಾರೆ. ಸೆಕ್ಷನ್ 498A ಸಂಪೂರ್ಣ ಪ್ರಮೇಯವು ಮಹಿಳೆಯರನ್ನು ಶೋಷಣೆ, ಕಿರುಕುಳ ಅಥವಾ ದೈಹಿಕವಾಗಿ ಅಥವಾ ಮಾನಸಿಕವಾಗಿ ನಿಂದನೆಯಿಂದ ರಕ್ಷಿಸುವುದು ನಿಜ. ಆದರೆ ಇದೇ ಸೆಕ್ಷನ್ ಸಮಾಜದಲ್ಲಿ ಪುರುಷರಿಗೆ ಪಿಡುಗಾಗಿ ಪರಿಣಮಿಸಿರುವ ಹಲವಾರು ನಿದರ್ಶನಗಳಿವೆ ಎಂದಿದ್ದಾರೆ. ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ಮತ್ತು ಅಮಾಯಕ ಕುಟುಂಬ ಸದಸ್ಯರಿಗೆ ಅನಗತ್ಯ ತೊಂದರೆ ತಪ್ಪಿಸಲು ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ನ್ಯಾಯಾಲಯಗಳು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
























